August 30, 2025
NARENDRA MODI

ಬೆಂಗಳೂರು: ಕರ್ನಾಟಕ ಸರ್ಕಾರ ಫ್ರೀ ಸ್ಕೀಂ ನಿಲ್ಲಿಸಲು ಹೊರಟಿದೆ ಎಂದು ಪ್ರಧಾನಿ ಮೋದಿ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪಿಎಂ ಟ್ವೀಟ್ ಮಾಡಿದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಕಳೆದ ಎರಡು ಲೋಕಸಭಾ ಚುನಾವಣೆಗೆ ನೀಡಿದ್ದ ಪ್ರಣಾಳಿಕೆಯ ಜೊತೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪಿಎಂ ಮೋದಿಗೆ ಸವಾಲು ಹಾಕಿದ್ದಾರೆ.

ರಾಜಕೀಯ ಪುಡಾರಿಯ ರೀತಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸುಳ್ಳು ಆರೋಪ ಎಂದು ಆಕ್ರೋಶ ಹೊರಹಾಕಿರುವ ಸಿಎಂ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ. ಎಲ್ಲವನ್ನೂ ಪಕ್ಷ, ರಾಜಕೀಯದ ಹಳದಿ ಕನ್ನಡಕದಿಂದ ನೋಡುವ ಅಭ್ಯಾಸವನ್ನು ಬಿಟ್ಟು ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದಿದ್ದಾರೆ.

ಪ್ರೀತಿ ಮತ್ತು ಬದ್ಧತೆಯಿಂದ ಪ್ರಾಮಾಣಿಕವಾಗಿ ತಮ್ಮ ಬೆವರಗಳಿಕೆಯನ್ನು ತೆರಿಗೆಯಾಗಿ ನೀಡಿ ದೇಶದ ಬೊಕ್ಕಸವನ್ನು ತುಂಬಿದವರು ಕನ್ನಡಿಗರು. ದೇಶದಲ್ಲಿ ಮಹಾರಾಷ್ಟ್ರದ ನಂತರ ಅತ್ಯಂತ ಹೆಚ್ಚು ನೇರ ತೆರಿಗೆ (11.9%) ಪಾವತಿಯಾಗಿರುವುದು ಕರ್ನಾಟಕ ರಾಜ್ಯದಲ್ಲಿ ಎನ್ನುವುದನ್ನು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ಒಪ್ಪಿಕೊಂಡಿರುವುದನ್ನು ನೀವು ಗಮನಿಸಿರಬಹುದೆಂದು ಭಾವಿಸಿದ್ದೇನೆ. ನಾವು ನುಡಿದಂತೆ ನಡೆದಿದ್ದೇವೆ, ನಿಮ್ಮ ಭರವಸೆಗಳೇನಾಯಿತು? ಪ್ರತಿಯೊಬ್ಬನ ಖಾತೆಗೆ ಹದಿನೈದು ಲಕ್ಷ ರೂಪಾಯಿ ಜಮೆ ಆಯಿತೇ? ಕಪ್ಪು ಹಣ ಮಾಯವಾಯಿತೇ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಯಿತೇ? ರೈತರ ಆದಾಯ ದುಪ್ಪಟ್ಟಾಯಿತೇ? ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ? ಎಲ್ಲಿದೆ ನಿಮ್ಮ ಮೇಕ್ ಇನ್ ಇಂಡಿಯಾ? ನಿಮ್ಮ ಸಾಧನೆಗಳಾದರೂ ಏನು? ನಾಡನ್ನು ಸಾಲದ ಕೂಪಕ್ಕೆ ತಳ್ಳಿದ್ದೆ? ಸುಳ್ಳು ಮತ್ತು ಅಪಪ್ರಚಾರದ ಮೂಲಕ ನಿಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿದ್ದೇ?

ಪ್ರಧಾನಿ ನರೇಂದ್ರ ಮೋದಿ ಅವರೇ, ಆಗಾಗ ನೀವು ಸುಳ್ಳು ಸಂಗತಿಗಳನ್ನು ಪೋಣಿಸಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದೀರಿ. ಈ “ ತೂ ತೂ ಮೈ ಮೈ..” ಚರ್ಚೆಗೆ ತಾರ್ಕಿಕವಾದ ಅಂತ್ಯ ಹಾಡಿ ಬಿಡೋಣ. ಕಳೆದ ಎರಡು ಲೋಕಸಭಾ ಚುನಾವಣೆಯ ಮುನ್ನ ನಿಮ್ಮ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದು ಸಾರ್ವಜನಿಕ ಚರ್ಚೆಯನ್ನು ಹಮ್ಮಿಕೊಳ್ಳೋಣ. ಪ್ರಣಾಳಿಕೆಯಲ್ಲಿ ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟನ್ನು ನೀವು ಈಡೇರಿಸಿದ್ದೀರಿ? ಎನ್ನುವುದನ್ನು ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ. ದೇಶದ ಪ್ರಜ್ಞಾವಂತ ಜನರೇ ಯಾರದ್ದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದನ್ನು ತೀರ್ಮಾನಿಸಲಿ ಎಂದು ಸವಾಲು ಹಾಕಿದ್ದಾರೆ.

About The Author

Leave a Reply