
ಮಂಗಳೂರು: ತನ್ನ ಮಗು ಹೃದಯ್ ಹಾಗೂ ಪತ್ನಿ ಪ್ರಿಯಂಕಾ ಅವರನ್ನು ಕೊಂದು ಬೆಳ್ಳಾಯರು ಗ್ರಾಮದ ರೈಲ್ವೆ ಬ್ಲ್ಯಾಕ್‌ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೆಚ್ಚಿನ ಕೈಸಾಲವನ್ನು ಕಾರ್ತಿಕ್ ಮಾಡಿಕೊಂಡಿದ್ದ ಎನ್ನುವ ಅಂಶ ಬೆಳಕಿಗೆ ಬರುತ್ತಲಿದೆ.



ಆದರೆ ಈ ಬಗ್ಗೆ ಯಾರೊಬ್ಬರೂ ಪೊಲೀಸ್ ದೂರು ನೀಡಲು ಮುಂದೆ ಬರುತ್ತಿಲ್ಲ.
ಅಡವಿಟ್ಟ ಚಿನ್ನಾಭರಣ ಬಿಡಿಸಿಕೊಂಡು ವಂಚನೆ ಮಾಡಿದ್ದು, ಒಂದು ಕಡೆಯಾದರೆ, ಕೆಲವೇ ದಿನಗಳ ಹಿಂದೆಯಷ್ಟೇ ಪರಿಚಯಸ್ಥರ ಉಂಗುರವನ್ನು ಪಡೆದುಕೊಂಡು ಅದನ್ನು ಅಡವಿಟ್ಟು 50 ಸಾವಿರ ರೂ. ಪಡೆದುಕೊಂಡಿದ್ದ ಎಂದೂ ಹೇಳಲಾಗುತ್ತಿದೆ. ಪುನರೂರು ಕೆರೆಕಾಡಿನ ಉದ್ಯಮಿಯೋರ್ವರಲ್ಲಿ 3 ಲಕ್ಷ ರೂ. ಹಣ ಬೇಕೆಂದು ವಿನಂತಿಸಿಕೊಂಡಿದ್ದು, ಅವರು ಕಾರ್ತಿಕ್‌ಗೆ ಹಣ ನೀಡಿದ್ದಾರೆ. ಆದರೆ ಅವರು ಎಷ್ಟು ಹಣ ನೀಡಿದ್ದಾರೆ ಎಂದು ಹೇಳಲು ಮುಂದೆ ಬರುತ್ತಿಲ್ಲ. ಪೊಲೀಸರು ತನಿಖೆಯ ಬಗ್ಗೆ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸುತ್ತಿಲ್ಲ.
ಇನ್ನೂ ಹಲವಾರು ಘಟನೆಗಳ ಬಗ್ಗೆ ಜನರು ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಯಾವುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ತನಿಖೆ ಪೂರ್ಣವಾದ ಬಳಿಕ ಪೊಲೀಸರು ನೀಡುವ ಅಧಿಕೃತ ಹೇಳಿಕೆಗಳಿಂದ ಸಾರ್ವಜನಿಕ ವಲಯದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಮಹಮ್ಮದ್ ಅವರು ಕಾರ್ತಿಕ್ ತನಗೆ ಮಾಡಿರುವ ವಂಚನೆಯ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.