ಮಂಗಳೂರು: ಈಜುಕೊಳದಲ್ಲಿ ಉಸಿರುಗಟ್ಟಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್ವರದ ವಾಝ್ಕೋ ಬೀಚ್ ರೆಸಾರ್ಟ್ ಮಾಲೀಕ ಮತ್ತು ಮ್ಯಾನೆಜರ್ ಅನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಸೋಮೇಶ್ವರದ ವಾಝ್ಕೋ ಬೀಚ್ ರೆಸಾರ್ಟ್ ಮಾಲೀಕ ಮನೋಹರ್ ಹಾಗೂ ಮ್ಯಾನೆಜರ್ ಭರತ್ ಬಂಧಿತರು.
ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ನಿಶಿತಾ ಎಂ.ಡಿ.(21), ಮೈಸೂರು ರಾಮಾನುಜ ರಸ್ತೆಯ ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್.(20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್(21) ಎಂಬ ಮೂವರು ಶನಿವಾರ ಬೆಳಗ್ಗೆ ವಾಝ್ಕೋ ಬೀಚ್ ರೆಸಾರ್ಟ್‌ಗೆ ಬಂದು ತಂಗಿದ್ದರು. ರವಿವಾರ ಬೆಳಗ್ಗೆ 10ಗಂಟೆ ಸುಮಾರಿಗೆ ಮೂವರೂ ರೆಸಾರ್ಟ್ ಮುಂಭಾಗದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇಳಿದು ನೀರಾಟ ಆಡುತ್ತಿದ್ದರು.
ಈ ವೇಳೆ ಇವರಲ್ಲೊಬ್ಬ ಯುವತಿ ಈಜುಕೊಳದ ಮಧ್ಯದ ಆಳವಿದ್ದ ಕಡೆ ಹೋಗಿ ಸಿಲುಕಿಕೊಂಡಿದ್ದಳು. ಆಕೆ ಒದ್ದಾಡುತ್ತಿರುವುದನ್ನು ಗಮನಿಸಿ ಮತ್ತಿಬ್ಬರು ರಕ್ಷಣೆಗೆ ಧಾವಿಸಿದ್ದರು. ಆದರೆ ಮೂವರಿಗೂ ಈಜು ಬಾರದ ಕಾರಣ ಈ ಸಾವು ಸಂಭವಿಸಿದೆ. ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ರಾತ್ರಿ ಮಂಗಳೂರಿಗೆ ಆಗಮಿಸಿದ ಮೃತರ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾಝ್ಕೋ ಬೀಚ್ ರೆಸಾರ್ಟ್‌ನ ಮಾಲಕ ಮನೋಹರ್ ಮತ್ತು ಮ್ಯಾನೇಜರ್ ಭರತ್‌ನನ್ನು ಬಂಧಿಸಿದ್ದಾರೆ. ವಾಝ್ಕೋ ಬೀಚ್ ರೆಸಾರ್ಟ್‌ಗೆ ಅಧಿಕಾರಿಗಳು ಬೀಗಮುದ್ರೆ ಜಡಿದಿದ್ದು ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಹಾಗೂ ಟೂರಿಸಂ ಪರವಾನಿಗೆಯನ್ನು ಅಮಾನತುಗೊಳಿಸಿದ್ದಾರೆ.