ಪುತ್ತೂರು: ನಗರದ ನೆಲ್ಯಾಡಿಯ ಮಣ್ಣಗುಂಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಢಿಕ್ಕಿಯಾದ ಪರಿಣಾಮ ಕಾರುಸವಾರ ಪುತ್ತೂರಿನ ಯುವಕ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಪುತ್ತೂರಿನ ತಿಂಗಳಾಡಿ ಸಮೀಪದ ತ್ಯಾಗರಾಜೆಯ ಮಜ್ಜರಡ್ಕದ ರಾಮಣ್ಣ ಪೂಜಾರಿ ಎಂಬವರ ಪುತ್ರ ಜಗದೀಶ್(26) ಮೃತಪಟ್ಟ ದುರ್ದೈವಿ. ಜಗದೀಶ್ ಅವರು ಸಚಿನ್ ಎಂಬವರೊಂದಿಗೆ ಶಿರಾಡಿ ಗಡಿಭಾಗದ ಶಿರಾಡಿ ಚಾಮುಂಡೇಶ್ವರಿ ದೈವ ಕ್ಷೇತ್ರಕ್ಕೆ ಹೋಗಿ ಹಿಂತಿರುಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ರವಿವಾರ ಸಂಜೆ ವೇಳೆ ಮಳೆಯೂ ಸುರಿಯುತ್ತಿತ್ತು. ಪರಿಣಾಮ ಕಾರು ಸ್ಕಿಡ್ ಆಗಿದ್ದು ಡಿವೈಡರ್ ಮೇಲೇರಿ ಹೋಗಿದೆ. ಪರಿಣಾಮ ಜಗದೀಶ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕಾರು ಚಾಲಕ ಸಚಿನ್ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.