August 30, 2025
WhatsApp Image 2024-11-18 at 5.32.42 PM

ಪುತ್ತೂರು: ಗ್ರಾಮದ ಅಂಗಡಿಯೊಂದಕ್ಕೆ ಬಂದಿದ್ದ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನ ಮಾಡಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ಅರಸ್ ವೈ.ಎಚ್. ಅವರ ಪೀಠ ತೀರ್ಪು ನೀಡಿದೆ. ಬದ್ರುದ್ದೀನ್ ಯಾನೆ ಬದ್ರು ಶಿಕ್ಷೆಗೆ ಒಳಗಾದ ಅಪರಾಧಿ. 2022ರ ಸೆ. 14ರಂದು ತಿಂಗಳಾಡಿಯ ನ್ಯೂ ಸೂಪ‌ರ್ ಬಜಾ‌ರ್ ಜನರಲ್ ಸ್ಟೋರ್ ಕೆದಂಬಾಡಿ ಸ್ವೀಟ್ ಸ್ಟಾಲ್ ಎಂಬ ಅಂಗಡಿಗೆ ತಿಂಗಳಾಡಿಯಲ್ಲಿ ತನ್ನ 7 ವರ್ಷದ ಮಗಳೊಂದಿಗೆ ಬಂದಿದ್ದ ಮಹಿಳೆ ತಿಂಡಿ ಖರೀದಿಸಿ ಅಂಗಡಿಯವರಿಗೆ ಹಣವನ್ನು ನೀಡುತ್ತಿದ್ದ ವೇಳೆ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಅಂಗಡಿಯೊಳಗೆ ಬಂದು ಮಹಿಳೆಯ ಮಾನಭಂಗಕ್ಕೆ ಯತ್ನ ಮಾಡಿದ್ದ. ಈ ಕುರಿತು ಮಹಿಳೆ ನೀಡಿದ್ದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿ ವಿರುದ್ಧ ಕಲಂ 354 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ.. ರಾಮಕೃಷ್ಣ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ದಂಡದ ಹಣದಲ್ಲಿ 5 ಸಾವಿರ ರೂ. ಅನ್ನು ಸಂತ್ರಸ್ತೆಗೆ ನೀಡುವಂತೆಯೂ ಆದೇಶಿಸಲಾಗಿದೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಬೋಳೂರು ವಾದಿಸಿದ್ದರು.

About The Author

Leave a Reply