ಮಂಗಳೂರು: ತಲಪಾಡಿ ಟೋಲ್ ಸಿಬ್ಬಂದಿಗೆ ತಂಡದಿಂದ ಹಲ್ಲೆ..!!

ಮಂಗಳೂರು : ಟೋಲ್ ಸಿಬ್ಬಂದಿಗೆ ಕಾರಿನಲ್ಲಿದ್ದ ಮೂವರ ತಂಡ ಹಲ್ಲೆ ಎಸಗಿರುವ ಘಟನೆ ರಾ.ಹೆ. 66ರ ತಲಪಾಡಿಯಲ್ಲಿ ಭಾನುವಾರ ತಡರಾತ್ರಿ ವೇಳೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಉಳ್ಳಾಲದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

ಹಲ್ಲೆ ನಡೆಸಿದ ಮೂವರು ಆರೋಪಿಗಳು ಮೂಲತಃ ಉಳ್ಳಾಲ ನಿವಾಸಿಗಳಾಗಿದ್ದು, ಅವರನ್ನು ಝುಲ್ಪಾನ್, ನಿಫಾನ್, ಫಯಾಝ್ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಕೇರಳ ಕಡೆಗೆ ಉತ್ತರಪ್ರದೇಶ ನೋಂದಾಯಿತ ಐ-20 ಕಾರೊಂದರಲ್ಲಿ ಐವರು ಯುವಕರು ತೆರಳುತ್ತಿದ್ದರು. ತಲಪಾಡಿ ಟೋಲ್ ಗೇಟಿನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕಾರಿನಲ್ಲಿದ್ದ ಯುವಕರ ತಂಡ ಕಾರನ್ನು ಮುಂದೆ ನಿಲ್ಲಿಸಿ ಸಿಬ್ಬಂದಿ ಬಳಿಗೆ ಬಂದು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿರುತ್ತಾರೆ.

ಘಟನೆಯಲ್ಲಿ ಟೋಲ್ ಸಿಬ್ಬಂದಿ ಮನು, ಸುಧಾಮ, ಅಮನ್ ಅವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply