ಉಪ್ಪಿನಂಗಡಿ: ಅಸ್ಸಾಂ ಮೂಲದ ಕಾರ್ಮಿಕನ ಕೊಲೆ-ನಿರ್ಮಾಣ ಹಂತದ ಕಟ್ಟಡದಲ್ಲಿ ಕೃತ್ಯ

ಉಪ್ಪಿನಂಗಡಿ:ಗ್ರಾಪಂ ಸೇರಿದ ಬಹುಮಹಡಿ ಕಟ್ಟಡವೊಂದರಲ್ಲಿ ಯುವಕನೋರ್ವ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಬೆಳಗ್ಗೆ ಪತ್ತೆಯಾಗಿದೆ. ಮೃತ ದೇಹದ ಬಳಿ ಇದ್ದ ಚುನಾವಣಾ ಗುರುತು ಚೀಟಿಯ ಆಧಾರದಲ್ಲಿ ಮೃತರನ್ನು ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕ್ರಿಶ್ಚಿಯನ್ ಗ್ರಾಮದ ತಿಮ್ಮತಿ ಬೆಂಗರ ಎಂಬವರ ಮಗ ದೀಪಕ್ ಬೆಂಗರ (34) ಎಂದು ಗುರುತಿಸಲಾಗಿದೆ.

ಈತ ಇಲ್ಲಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ಕೆಲಸ ಬಿಟ್ಟಿದ್ದು, ಬಳಿಕ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ತೊಡಗಿಕೊಂಡಿದ್ದರು. ಘಟನೆ ನಡೆದ ಸ್ಥಳವು ಉಪ್ಪಿನಂಗಡಿ ಗ್ರಾಪಂಗೆ ಸೇರಿದ ಜಾಗವಾಗಿದ್ದು, ಇಲ್ಲಿ ಗ್ರಂಥಾಲಯದ ಬಹುಮಹಡಿ ಕಟ್ಟಡದ ನಿರ್ಮಾಣ ನಡೆಯುತ್ತಿದ್ದು, ಮೊದಲನೇ ಮಹಡಿಯಲ್ಲಿ ದೀಪಕ್‌ರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಗಾರರಿಗೆ ರವಿವಾರ ರಜೆಯಿದ್ದು, ಸೋಮವಾರ ಮತ್ತು ಮಂಗಳವಾರ ಮಳೆಯ ಕಾರಣ ಇಲ್ಲಿನ ಕಟ್ಟಡ ನಿರ್ಮಾಣ ಕೆಲಸಗಾರರು ರಜೆ ಮಾಡಿದ್ದರು. ಬುಧವಾರ ಬೆಳಗ್ಗೆ ಕಟ್ಟಡಕ್ಕೆ ನೀರು ಹಾಕಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನನ್ನು ಡಿ.3ರಂದು ರಾತ್ರಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಕಟ್ಟಡದ ಗೋಡೆಗಳಲ್ಲಿ ನೆಲದ ಮೇಲಿದ್ದ ಕೆಂಪು ಕಲ್ಲುಗಳಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ಹೊಡೆದಾಟ ನಡೆದು ದೀಪಕ್‌ ತಲೆಗೆ ಯಾರೋ ಕಲ್ಲಿನಿಂದ ಹೊಡೆದು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಕೊಲೆಯಾದ ಜಾಗದಲ್ಲಿ ಚಾಪೆಗಳು, ಕಂಬಳಿಗಳು, ಪ್ಯಾಂಟ್, ಶರ್ಟ್, ಬ್ಯಾಗ್ ಕೂಡಾ ಕಂಡು ಬಂದಿದೆ. ಸಿಮ್ ಇಲ್ಲದ ಮೊಬೈಲ್ ಪತ್ತೆ: ದೀಪಕ್‌ರ ಮೃತದೇಹದ ಸ್ವಲ್ಪ ದೂರದಲ್ಲಿ ಮೊಬೈಲೊಂದು ಪತ್ತೆಯಾಗಿದೆ. ಆದರೆ ಅದರ ಸಿಮ್ ನಾಪತ್ತೆಯಾಗಿದೆ. ಕೊಲೆ ನಡೆಸಿದವರು ಸಿಮ್ ಅನ್ನು ತೆಗೆದುಕೊಂಡು ಮೊಬೈಲ್ ಅಲ್ಲೇ ಬಿಸಾಡಿರಬಹುದೆಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಗ್ರಾಪಂ . ಕಾರ್ಯದರ್ಶಿ ಗೀತಾ ಬಿ. ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಯತೀಶ್ ಎನ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ, ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Reply