August 30, 2025
WhatsApp Image 2024-12-11 at 9.19.06 AM

ಮಂಗಳೂರು: WhatsApp ಮತ್ತು ಟೆಲಿಗ್ರಾಂ ಲಿಂಕ್‌ ಮೂಲಕ ಕೆಲಸದ ಆಮಿಷ ತೋರಿಸಿ ಆನ್‌ಲೈನ್‌ ಮೂಲಕ ಕೊಣಾಜೆ ನಿವಾಸಿಯಿಂದ ಹಣ ಪಡೆದುಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಮತ್ತು ಜಮ್ಮು ಕಾಶ್ಮೀರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರಿನ ಜಲಸಂದ್ರ ನಿವಾಸಿ ಅಮೀರ್‌ ಸುಹೇಲ್‌ ಹಾಗೂ ಕಾಶ್ಮೀರ ನಿವಾಸಿ ಸುಹೈಲ್‌ ಅಹ್ಮದ್‌ ವಾನಿಯನ್ನು ಬಂಧಿಸಲಾಗಿದೆ.ಆರೋಪಿಗಳು 2024ರ ಜು. 21ರಂದು ಪಾರ್ಟ್‌ ಟೈಮ್‌ ಜಾಬ್‌ ಕುರಿತು ವಾಟ್ಸಪ್‌ ಮತ್ತು ಟೆಲಿಗ್ರಾಂ ಲಿಂಕ್‌ ಕಳುಹಿಸಿದ್ದರು. ಕೆಲಸ ಏನೆಂದು ಕೇಳಿದ ತತ್‌ಕ್ಷಣ ವೀಡಿಯೋ ಕಳುಹಿಸಿ ಅದರ ಸ್ಕ್ರೀನ್‌ ಶಾಟ್‌ ಕಳುಹಿಸಲು ತಿಳಿಸಿ ಅವರಿಗೆ 130 ರೂ. ಅನ್ನು ಪಾವತಿಸಿ, ಅನಂತರ ಮತ್ತೆ ಹಾಕಿದ ವೀಡಿಯೋ ತಪ್ಪಾಗಿದೆ ಎಂದು ಹೇಳಿ ಇನ್ನೊಂದು ಲಿಂಕ್‌ ಕಳುಹಿಸಿದ್ದರು.ಆ ಲಿಂಕ್‌ ಓಪನ್‌ ಮಾಡಿದ ತತ್‌ಕ್ಷಣ 1 ಸಾವಿರ ರೂ. ಮೊತ್ತವನ್ನು ಹಾಕಲು ಹೇಳಿ ಅನಂತರ ಹಂತ ಹಂತವಾಗಿ ಅಕೌಂಟಿನಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಒಟ್ಟು 28,18,065 ರೂ. ವಂಚನೆ ಮಾಡಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಈಗಾಗಲೇ ಬೆಂಗಳೂರು, ಮೈಸೂರು ಮೂಲದ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಅವರು ವಿಚಾರಣೆ ವೇಳೆ ಬಂಧಿತರಿಬ್ಬರ ಮಾಹಿತಿ ನೀಡಿದ್ದರು. ಇಬ್ಬರು ಆರೋಪಿಗಳು ಹಲವು ಬ್ಯಾಂಕುಗಳಲ್ಲಿ ಬೇರೆ-ಬೇರೆಯವರ ಹೆಸರಿನಲ್ಲಿ ಮತ್ತು ತಮ್ಮ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳನ್ನು ಮಾಡಿಸಿರುವುದು ವಿಚಾರಣೆಯಲ್ಲಿ ಕಂಡುಬಂದಿತ್ತು. ಅಲ್ಲದೆ ಬೇರೆಯವರ ಖಾತೆಗೆ ದಿನಕ್ಕೆ 3 ಸಾವಿರದಿಂದ 4 ಸಾವಿರ ರೂ. ಹಣ ನೀಡಿ ಬೇರೆ ಬೇರೆ ಕಡೆಗಳಲ್ಲಿ ಅಕೌಂಟ್‌ ಮಾಡಿಸಿರುವುದು ಕಂಡುಬಂದಿದೆ. ಪೊಲೀಸ್‌ ತನಿಖೆ ಮುಂದುವರಿದಿದೆ.ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ನಿರ್ದೇಶನದಂತೆ ಕೊಣಾಜೆ ಠಾಣೆಯ ನಿರೀಕ್ಷಕ ರಾಜೇಂದ್ರ ಬಿ. ಹಾಗೂ ಪಿಎಸ್‌ಐ ಪುನೀತ್‌ ಗಾಂವ್ಕರ್‌, ನಾಗರಾಜ್‌, ಎಎಸ್‌ಐ ಪ್ರವೀಣ್‌ ಹಾಗೂ ಸಿಬಂದಿ ರೇಷ್ಮಾ, ರಾಮ ನಾಯ್ಕ, ಬಸವನ ಗೌಡ, ದರ್ಶನ್‌, ಸುರೇಶ್‌, ಮುತ್ತು, ಓಗೇನರ್‌ ಮತ್ತು ಸಂತೋಷ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Leave a Reply