
ಬೆಂಗಳೂರು : ರಾಜ್ಯದ ಪ್ರಮುಖ 5 ಗ್ಯಾರಂಟಿ ಯೋಜನೆಗಳ್ಳಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣ ಕೂಡಿಟ್ಟು, ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅತ್ತೆ ಹಾಗೂ ಸೊಸೆ ಬೋರ್ವೆಲ್ ಕೊರೆಸಿರುವುದು ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಒಂದು ವಿಚಾರ ಸಿಎಂ ಸಿದ್ದರಾಮಯ್ಯ ಅವರಿಗೂ ತಲುಪಿದ್ದು, ಗೃಹಲಕ್ಷ್ಮಿ ಹಣದಿಂದ ಅತ್ತೆ ಸೊಸೆ ಜಗಳವಾಡುತ್ತಾರೆ ಎಂದು ಟೀಕಿಸಿದ್ದ ಬಿಜೆಪಿಗೆ ತಪರಾಕಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿರುಗೇಟು ನೀಡಿದ್ದಾರೆ.



ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ – ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು.ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ.
ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದಿದ್ದಾರೆ.