ಬಿ.ಸಿ.ರೋಡ್ ನಲ್ಲಿ ಮನೆಗೆ ದಾಳಿ ಮಾಡಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ- ವಿಮ್ ರಾಜ್ಯ ನಾಯಕಿಯರ ನಿಯೋಗ

ಮಂಗಳೂರು: ಇತ್ತೀಚೆಗೆ ಬಿ ಸಿ ರೋಡ್ ಸಮೀಪದ ಮದ್ದದಲ್ಲಿ ಶಾಹುಲ್ ಹಮೀದ್ ರವರ ಮನೆಗೆ ಮಧ್ಯರಾತ್ರಿಯಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಮಂದಿ ಸೇರಿದಂತೆ ಮಹಿಳೆಯರ ಮೇಲೆ ದಾಳಿ ಮಾಡಿ ಗಂಭೀರ ಹಲ್ಲೆ ನಡೆಸಿ ಹಣ ಮತ್ತು ಸರವನ್ನು ದೋಚಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ ಪುರಸಭಾ ಸದಸ್ಯ ಹಸೈನಾರ್ ನೇತೃತ್ವದ ರೌಡಿ ಶೀಟರ್ ಹಿನ್ನಲೆಯ ತಂಡದ ಆರೋಪಿಗಳನ್ನು ಕೊಡಲೇ ಬಂಧಿಸುವಂತೆ ಒತ್ತಾಯಿಸಿ ವಿಮನ್ ಇಂಡಿಯಾ ಮೂವ್ ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ನೇತೃತ್ವದ ಮಹಿಳೆಯರ ತಂಡ ಇಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರನ್ನು ಭೇಟಿಯಾಗಿದೆ.

ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿಮ್ ಸಂಘಟನೆಯ ನಾಯಕಿಯರು ಪೋಕ್ಸೋ, ಕೊಲೆ ಯತ್ನದ ಗಂಭೀರ ಪ್ರಕರಣಗಳು ಆರೋಪಿಗಳ ಮೇಲೆ ದಾಖಲಾಗಿದೆ . ಆದರೆ ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಪೊಲೀಸ್ ಇಲಾಖೆ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಆರೋಪಿಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಹಾಗೂ ಅಕ್ರಮ ಮರಳುಗಾರಿಕೆಯನ್ನು ಲೀಲಾಜಾಲವಾಗಿ ನಡೆಸುತ್ತಿದ್ದಾರೆ. ಮಾದಕ ವ್ಯಸನದ ದಾಸರಾಗಿರುವ ಆರೋಪಿಗಳು ಬಂಟ್ವಾಳ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ತನ್ನ ಗೂಂಡಾ ಪ್ರವೃತ್ತಿಯನ್ನು ನಡೆಸುತ್ತಿದ್ದು ಇವರ ಮೇಲೆ ಹಲವಾರು ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿದೆ. ಸಮಾಜದಲ್ಲಿ ಗೌರವದಿಂದ ಜೀವನ ನಡೆಸುವ ಗಣ್ಯ ವ್ಯಕ್ತಿಗಳ ಮನೆಗಳಿಗೆ ದಾಳಿ ನಡೆಸಿ ಸಮಾಜದಲ್ಲಿ ಭಯದ ವಾತಾವರಣ ಉಂಟು ಮಾಡುವ ಇಂತಹ ಕ್ರಿಮಿನಲ್ ಗಳನ್ನು ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದಲ್ಲಿ ವಿಮನ್ ಇಂಡಿಯಾ ಮೂವ್ಮೆಂಟ್ ಇತರ ಮಹಿಳಾ ಸಂಘಟನೆಗಳನ್ನು ಒಗ್ಗೂಡಿಸಿ ತೀವ್ರ ರೀತಿಯ ಚಳುವಳಿಯನ್ನು ಹಮ್ಮಿಕೊಳ್ಳಲಿದೆಯೆಂದು ಎಚ್ಚರಿಸಿದರು. ಪೊಲೀಸ್ ಅಧಿಕಾರಿಗಳನ್ನು ಬೇಟಿಯಾದ ನಿಯೋಗದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಶಾಹಿದಾ ತಸ್ನೀಂ, ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಾಹಿದಾ ಸಾಗರ್, ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್, ಸಂತ್ರಸ್ತೆ ಸಾಬಿರಾ ಹಾಗೂ ಝುಲೈಖ ಪರ್ಲಿಯ ಹಾಜರಿದ್ದರು.

Leave a Reply