October 13, 2025
mccbb

ಮಂಗಳೂರು : ಬ್ಯಾಂಕ್ ಸಾಲದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನನ್ನು ಪೊಲೀಸರು ಬಂಧಿಸಿದ್ದಾರೆ. ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿದವರು.

ಆತ್ಮಹತ್ಯೆಗೂ ಮುನ್ನ ಅವರು ತಾನು ಆತ್ಮಹತ್ಯೆ ಮಾಡಲು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋನೇ ಕಾರಣ ಎಂದು ಮೊಬೈಲ್ ವೀಡಿಯೋ ಮಾಡಿದ್ದರು. ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ 10ವರ್ಷಗಳ ಹಿಂದೆ ಸಾಲ ಪಡೆದಿದ್ದರು.

ಈ ಸಾಲದ ಕಂತನ್ನು ಅವರ ದೊಡ್ಡಣ್ಣ ಮೆಲ್ಬಮ್‌ರವರು ತೀರಿಸುತ್ತಿದ್ದರು. ಕೊರೋನಾ ಸಂದರ್ಭ ಮೆಲ್ಬಮ್‌ರವರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಲೋನ್ ಕಂತು ಬ್ಯಾಂಕಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2ವರ್ಷಗಳ ಹಿಂದೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನೋಹರ್ ಪಿರೇರಾರಿಗೆ ಮಾನಸಿಕ ಖಿನ್ನತೆ ಉಂಟಾಗಿ 2ಸಲ ಹೃದಯಾಘಾತವಾಗಿತ್ತು. ಬಳಿಕ ಸಿಸ್ಟರ್ ಕ್ರಿಸ್ಟಿನ್ ಅವರು ದತ್ತಿ ಸಂಸ್ಥೆಯಿಂದ 2023ರ ಫೆಬ್ರವರಿಯಲ್ಲಿ ಮನೋಹರ್‌ರವರ ಬ್ಯಾಂಕ್ ಖಾತೆಗೆ 15 ಲಕ್ಷ ಕಳಿಸಿದ್ದಾರೆ.

ಈ ಹಣದಲ್ಲಿ ಬ್ಯಾಂಕ್ ಸಾಲ ತೀರಿಸುವ ಬಗ್ಗೆ ಮನೋಹರ್ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋರೊಂದಿಗೆ ಮಾತನಾಡಿ ಸೆಲ್ಸ್ ಚೆಕ್ ನೀಡಿದ್ದರು. ಬಳಿಕ ಬ್ಯಾಂಕಿನವರು ಸೀಜ್ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್ ವಾಸಕ್ಕೆ ಬಿಟ್ಟು ಕೊಟ್ಟಿದ್ದರು. ಲೋನ್ ಕಂತು ಇನ್ನೂ ಕೂಡ ಬಾಕಿ ಇರುವುದರಿಂದ ಮನೋಹರ್‌ರವರು ಮಾನಸಿಕವಾಗಿ ನೊಂದು ಡಿಸೆಂಬರ್ 17ರಂದು ಸಂಜೆ 3.45 ರಿಂದ 5ಗಂಟೆಯ ಒಳಗೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಮೊಬೈಲ್ ವೀಡಿಯೊ ಮಾಡಿ ತುಳು ಭಾಷೆಯಲ್ಲಿ ‘MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸೀಜ್ ಮಾಡಿರುವ ಮನೆಗೆ ತಾನು 15 ಲಕ್ಷ ಕೊಟ್ಟಿದ್ದೇನೆ. ಆದರೆ ಆತ 9 ಲಕ್ಷ ತಿಂದಿದ್ದಾನೆ’ ಎಂದು ಹೇಳಿದ್ದಾರೆ.

ಸಿಸ್ಟರ್ ಕ್ರಿಸ್ಟಿನ್ ಅವರು ದತ್ತಿ ಸಂಸ್ಥೆಯಿಂದ ಕಳುಹಿಸಿದ್ದ 15 ಲಕ್ಷ ಹಣದಲ್ಲಿ 9 ಲಕ್ಷ ರೂ. ಹಣವನ್ನು ಬ್ಯಾಂಕ್ ಅಧ್ಯಕ್ಷ ಸೆಲ್ಫ್ ಚೆಕ್ ಮೂಲಕ ತೆಗೆದುಕೊಂಡಿದ್ದರಿಂದ ಮನೆಯ ಮೇಲಿನ ಸಾಲ ಇನ್ನೂ ತೀರಿಲ್ಲ ಎಂಬ ಹತಾಶೆಯಿಂದ ಮನೋಹರ್ ಪಿರೇರಾ ಅವರ ಅನಾರೋಗ್ಯ ಉಲ್ಬಣಿಸಿ ಮಾನಸಿಕ ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ.

About The Author

Leave a Reply