ಮಂಗಳೂರು: ಲೋಕಾಯುಕ್ತ ಎಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರನ್ನೇ ವಂಚಿಸಲು ಹೋದವ ಅರೆಸ್ಟ್..!!

ಮಂಗಳೂರು: ಲೋಕಾಯುಕ್ತ ಎಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರನ್ನೇ ವಂಚಿಸಲು ಹೋದ ಖದೀಮನೋರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲೂಕಿನ ಓ.ಡಿ.ಸಿ ಮಂಡಲ್, ವೆಂಕಟಾಪುರಂ ಪಂಚಾಯತ್, ನಲ್ಲಗುಟ್ಲಪಲ್ಲಿ ಗ್ರಾಮದ ನಿವಾಸಿ ಧನಂಜಯ ರೆಡ್ಡಿ ತೋಟ ಬಂಧಿತ ಆರೋಪಿ. 2024ರ ಎಪ್ರಿಲ್ 6ರಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್‌ಗೆ ಅಪರಿಚಿತನಿಂದ ವಾಟ್ಸ್ಆ್ಯಪ್ ಕರೆ ಬಂದಿದೆ. ಅತ್ತಕಡೆಯಿಂದ ಮಾತನಾಡಿದ ಅಪರಿಚಿತ ‘ತಾನು ಲೋಕಾಯುಕ್ತದಿಂದ ಮಾತನಾಡುತ್ತಿದ್ದೇನೆ‌. ತಮ್ಮ ಮೇಲೆ ಆರೋಪ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ’ ಎಂದು, ‘ಹಣ ನೀಡುವಂತೆ’ ತಿಳಿಸಿದ್ದಾನೆ. ‘ಇಲ್ಲವಾದಲ್ಲಿ ತೊಂದರೆ ಮಾಡುವುದಾಗಿ’ ಬೆದರಿಕೆ ಹಾಕಿದ್ದಾನೆ. ಆತ ಕರೆ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಟ್ರೂಕಾಲರ್‌ನಲ್ಲಿ ಪರೀಶೀಲಿಸಿದಾಗ ಡಿ.ಪ್ರಭಾಕರ ಲೋಕಾಯುಕ್ತ ಪಿ.ಐ ಎಂದು ಬಂದಿದೆ. ಈ ಬಗ್ಗೆ ಪುರುಷೋತ್ತಮ ಅವರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಅಧಿಕಾರಿಗಳಲ್ಲಿ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿ ಇರುವುದಿಲ್ಲವಾಗಿ ತಿಳಿದು ಬಂದಿದೆ. ಅಲ್ಲದೆ ಪುರುಷೋತ್ತಮ ಅವರ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಕೃಷ್ಣ ಆರ್. ಅವರಿಗೂ ಇದೇ ರೀತಿ ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಕರೆ ಮಾಡಿರುವ ಅಪರಿಚಿತ ಮೋಸದಿಂದ ಹಣ ಮಾಡುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಎಂದು ನಟಿಸಿದ್ದಾನೆ ಎಂದು ದೂರು ದಾಖಲಿಸಲಾಗಿತ್ತು‌. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿತನು ಇದೇ ರೀತಿಯ ಕೃತ್ಯ ಎಸಗಿದ ಬಗ್ಗೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸ್ ಠಾಣೆ ಹಾಗೂ ಹೈದರಾಬಾದ್‌ನ ಶಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ ತಿಳಿದು ಬಂದಿರುತ್ತದೆ.

Leave a Reply