ಸುಪ್ರೀಂ ಕೋರ್ಟ್ ಮೊರೆ ಹೋದ ಮಮ್ತಾಜ್‌ ಅಲಿ ಕುಟುಂಬಸ್ಥರು : ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ಜನವರಿ 9 ರ ವರೆಗೆ ಮುಂದೂಡಿಕೆ

ಮಂಗಳೂರು: ಮಾಜಿ ಶಾಸಕ ಮೊದೀನ್‌ ಬಾವಾ ಅವರ ಸಹೋದರ, ಉಧ್ಯಮಿ ಮಮ್ತಾಜ್‌ ಅಲಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ಮೇರೆಗೆ ಬಂಧಿಸಲ್ಪಟ್ಟಿರುವ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ 2025 ಜನವರಿ 9 ರ ವರೆಗೆ ಮುಂದೂಡಿದೆ. ಇದರಿಂದಾಗಿ ಆರೋಪಿಗಳ ನ್ಯಾಯಾಂಗ ಬಂಧನವು ಮುಂದುವರಿಯಲಿದೆ.
ಆಯೇಷಾ, ಗಂಡ ಶೋಹೆಬ್‌, ಅಬ್ದುಲ್ ಸತ್ತಾರ್‌ ಸಹಿತ ಇತರರು ಸೇರಿ ಹಣಕ್ಕಾಗಿ ಹನಿ ಟ್ರ್ಯಾಪ್‌ ಮಾಡಿ ಮುಮ್ತಾಝ್ ಅಲಿಯನ್ನು ಆತ್ಮಹತ್ಯೆಗೈಯ್ಯುವಂತೆ ಮಾಡಿದ್ದರು ಎಂದು ಕುಟುಂಬಸ್ಥರು ಕಾವೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
60 ದಿನಗಳ ಒಳಗಾಗಿ ಪೊಲೀಸರು ಚಾರ್ಜ್‌ ಶೀಟ್‌ ಹಾಕದೇ ಇರುವುದರಿಂದ ಜಾಮೀನು ನೀಡಲು ಅವಕಾಶವಿದ್ದು, ಜಾಮೀನು ಮಂಜೂರು ಮಾಡಬೇಕೇಂದು ಆರೋಪಿಗಳ ಪರ ವಕೀಲರು ಈ ಕುರಿತು ವಾದಿಸಿದ್ದರು. ಇದನ್ನು ಪರಿಗಣಿಸಿ ಸ್ಥಳೀಯ ಹಾಗೂ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡುವ ಸಾಧ್ಯತೆ ಇತ್ತು.
ಆದರೆ ಮಮ್ತಾಜ್‌ ಅಲಿ ಕುಟುಂಬಸ್ಥರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಮಮ್ತಾಝ್ ಕುಟುಂಬಸ್ಥರ ಪರ ವಾದಿಸಿರುವ ಪಿ.ಪಿ. ಹೆಗ್ಡೆ ಅವರು ಭಾರತೀಯ ನ್ಯಾಯ ಸಂಹಿತೆಯ ನೂತನ ಕಾಯ್ದೆಯ ಅನ್ವಯ 90 ದಿನಗಳ ಕಾಲಾವಕಾಶ ಇದೆ. ಹೀಗಾಗಿ ಮಾನ್ಯ ಮಾಡಬಾರದು ಎಂದು ವಾದಿಸಿದ್ದು, ಸುಪ್ರೀಂ ಕೋರ್ಟ್‌ ಆರೋಪಿಗಳ ಜಾಮೀನು ಅರ್ಜಿ ವಾದವನ್ನು ಜ. 9ರ ವರೆಗೆ ಮುಂದೂಡಿ ಭಾರತೀಯ ನ್ಯಾಯ ಸಂಹಿತೆಯ ಹೊಸ ಕಾನೂನಿನಂತೆ ನೀಡಬೇಕೆ ಅಥವಾ ಈ ಹಿಂದಿನ ಕಾನೂನು ಮಾನ್ಯವೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಿದೆ.

Leave a Reply