ಮಂಗಳೂರು : ಸೆನ್ ಪೋಲೀಸರ ಕಾರ್ಯಾಚರಣೆ – ಇಬ್ಬರು ಸೈಬರ್‌ ವಂಚಕರು ಅರೆಸ್ಟ್

ಮಂಗಳೂರು: ಎರಡು ಸೈಬರ್‌ ವಂಚನೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಸೆನ್‌ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ನೆಪದಲ್ಲಿ ವಂಚಿಸಿರುವ ಆರೋಪದಲ್ಲಿ ಕೇರಳದ ಜಾಫ‌ರ್‌ ಕೆ. (49) ಮತ್ತು ಟ್ರಾಯ್‌ ಪ್ರತಿನಿಧಿ ಎಂದು ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಆಕಾಶ್‌ ಎ.(22)ನನ್ನು ಬಂಧಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದೆಂದು ವ್ಯಕ್ತಿಯೋರ್ವನನ್ನು ನಂಬಿಸಿ ಅವರಿಂದ ಹಂತ ಹಂತವಾಗಿ 10,84,017 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಹಣ ಕೇರಳ ಪಾಲಕ್ಕಾಡ್‌ನ‌ ಜಾಫ‌ರ್‌ ಕೆ. ಈತನ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿ ಯೋರ್ವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ಆತನನ್ನು ಟ್ರಾಯ್‌ ಪ್ರತಿನಿಧಿ ಎಂಬುದಾಗಿ ಪರಿಚಯಿಸಿಕೊಂಡಿದ್ದ. “ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ಸಂಖ್ಯೆ ನೋಂದಣಿ ಆಗಿದ್ದು ಮುಂಬಯಿಯ ಅಂಧೇರಿಯಲ್ಲಿ ಅದನ್ನು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಳಸಲಾಗಿದೆ. ಹಾಗಾಗಿ ಕೂಡಲೇ ಪೊಲೀಸ್‌ ಠಾಣೆ ಸಂಪರ್ಕಿಸಬೇಕು’ ಎಂಬುದಾಗಿ ದೂರುದಾರರಿಗೆ ತಿಳಿಸಿದ್ದ. “ಡಿಜಿಟಲ್‌ ಅರೆಸ್ಟ್‌’ ಮಾಡುವುದಾಗಿ ಬಿಂಬಿಸಿ, ಹೆದರಿಸಿ ಹಂತ ಹಂತವಾಗಿ 1.71 ಕೋ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದ. ಪೊಲೀಸರು ಕೇರಳಕ್ಕೆ ತೆರಳಿ ಆರೋಪಿ ಆಕಾಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಸೈಬರ್‌ ಅಪರಾಧಕ್ಕೆ ತನ್ನ ಬ್ಯಾಂಕ್‌ ಖಾತೆಯನ್ನು ಉಪಯೋಗಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್‌ ಮತ್ತು ರವಿಶಂಕರ್‌ ಮಾರ್ಗದರ್ಶನದಲ್ಲಿ ಸೆನ್‌ ಠಾಣೆಯ ಎಸಿಪಿ ರವೀಶ್‌ ನಾಯಕ್‌ ಮತ್ತು ಸೆನ್‌ ಠಾಣಾ ನಿರೀಕ್ಷಕ ಸತೀಶ್‌ ಎಂ.ಪಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Leave a Reply