
ಮಂಗಳೂರು: ಕುಡ್ಲ ಪ್ರತಿಷ್ಠಾನದ ವತಿಯಿಂದ ಮಂಗಳೂರಿನ ಲಾಲ್‌ಬಾಗ್-ಲೇಡಿಹಿಲ್‌ನಲ್ಲಿ ನಡೆಯುತ್ತಿರುವ ಸ್ಟ್ರೀಟ್‌ಫುಡ್ ಫೆಸ್ಟ್ ಬಗ್ಗೆ ಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಕಟುವಾಗಿ ಟೀಕಿಸಿದ್ದಾರೆ.



‘ಲಾಲ್‌ಬಾಗ್ ಸ್ಟ್ರೀಟ್ ಫುಡ್ ಫೆಸ್ಟ್‌ಗೆ ಬೀದಿಬದಿ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ಆದರೆ, ಡಾಲಿಯವರು ಮಂಗಳೂರಿನವರಲ್ಲ ಎಂಬುವುದು ಖುಷಿಯ ವಿಚಾರ. ಒಂದು ವೇಳೆ ಡಾಲಿಯವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತು’ ಎಂದು ಹೇಳಿದರು.
ಬಿಜೆಪಿ ಆಡಳಿತವುಳ್ಳ ಮಂಗಳೂರು ಮನಪಾವು ಇತ್ತೀಚೆಗೆ ಮಂಗಳೂರು ನಗರಾದ್ಯಂತ ‘ಟೈಗರ್ ಕಾರ್ಯಾಚರಣೆ’ ಹೆಸರಿನಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಓಡಿಸಿ ಅವರ ಅಂಗಡಿಗಳನ್ನು ತೆರವುಗೊಳಿಸಿತ್ತು. ಬಿಜೆಪಿ ಆಡಳಿತವು ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಫುಟ್‌ಪಾತ್ ಅತಿಕ್ರಮಣ ವಿಚಾರವನ್ನು ಮುಂದಿಟ್ಟುಕೊಂಡು ಬಡ ಬೀದಿಬದಿ ವ್ಯಾಪಾರಸ್ಥರ ಆದಾಯದ ಮೂಲವನ್ನೇ ಧ್ವಂಸಗೊಳಿಸುವ ರೀತಿ ಗೂಡಂಗಡಿಗಳನ್ನು ತೆರವು ಗೊಳಿಸಿತ್ತು.
ಇದಕ್ಕೆ ಬೀದಿಬದಿ ವ್ಯಾಪಾರಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೆಲ್ಲಕ್ಕೆ ಕ್ಯಾರೇ ಎನ್ನದೆ ಬೀದಿಬದಿ ವ್ಯಾಪಾರವನ್ನು ತೆರವುಗೊಳಿಸಲಾಗಿತ್ತು. ಇದೀಗ ಬಿಜೆಪಿ ಬೆಂಬಲಿತರಿಂದಲೇ ಈ ಸ್ಟ್ರೀಟ್‌ಫುಡ್ ಫೆಸ್ಟ್ ನಡೆಸುತ್ತಿರುವುದು ಬಹಳ ಟೀಕೆಗೆ ಕಾರಣವಾಗಿದೆ. ಕಳೆದೆರಡು ದಿನಗಳಿಂದ ಹೊರರಾಜ್ಯದ ಡಾಲಿ ಚಾಯ್‌ವಾಲಾರನ್ನು ಫುಡ್‌ಫೆಸ್ಟ್‌ಗೆ ಅತಿಥಿಯಾಗಿ ಆಹ್ವಾನ ಮಾಡಿರುವುದಕ್ಕೆ ಬಹಳಷ್ಟು ಟೀಕೆಗಳು ಬಂದಿತ್ತು