November 8, 2025
WhatsApp Image 2025-02-05 at 9.25.22 AM

ಮಂಗಳೂರು: ಯಾವುದೇ ಮೂಲ ಸೌಲಭ್ಯಗಳಿಲ್ಲದ, ಅಸಮರ್ಪಕ, ಅವೈಜ್ಞಾನಿಕ ಮತ್ತು ಗೂಂಡಾಗಿರಿಗೆ ಕುಖ್ಯಾತಿ ಪಡೆದಿರುವ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ವಿವಾದಿತ ಟೋಲ್ ಗೇಟ್ ಮುಚ್ಚಬೇಕು ಎಂದು ಕೋರಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ತಾಲೂಕಿನ ರಾಷ್ಟೀಯ ಹೆದ್ದಾರಿ 75ರ ಬ್ರಹ್ಮರಕೊಟ್ಲುವಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿವಾದಿತ ಟೋಲ್ ಗೇಟ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಿಗೆ ವಿರುದ್ಧವಾಗಿ ಕಾರ್ಯಾಚರಿಸುತ್ತಿದೆ.

ಪ್ರಾಧಿಕಾರದ ನಿಯಮದಂತೆ ಟೋಲ್ ಸಂಗ್ರಹಿಸುವ ರಸ್ತೆಯನ್ನು ಎಲ್ಲಾ ಸಮಯದಲ್ಲೂ ಸುಸ್ಥಿತಿಯಲ್ಲಿ ಇಡಬೇಕು. ಅಂದರೆ ಹೆದ್ದಾರಿಯುದ್ದಕ್ಕೂ ದಾರಿದೀಪ ಅಳವಡಿಕೆ ಹಾಗೂ ಅದರ ಸಮರ್ಪಕ ನಿರ್ವಹಣೆ, ರಸ್ತೆಯಲ್ಲಿ ಪಾದಚಾರಿಗಳಿಗೆ ವಾಕಿಂಗ್ ಟ್ರ್ಯಾಕ್, ವಿಭಜಕಗಳಿಗೆ ಬಣ್ಣ ಬಳಿಯುವುದು, ಪಾದಚಾರಿಗಳಿಗೆ ರಸ್ತೆ ದಾಟಲು ಝೀಬ್ರಾ ಕ್ರಾಸ್, ಜನದಟ್ಟಣೆ ಇರುವಲ್ಲಿ ರಸ್ತೆ ದಾಟಲು ಅಂಡರ್ ಪಾಸ್ ಅಥವಾ ಫ್ಲೈ ವಾಕ್ , ಬಸ್ ಬೇ, ದೊಡ್ಡದಾದ ನೇಮ್ ಬೋರ್ಡ್(ನಾಮ ಫಲಕ), ಟಾಯ್ಲೆಟ್, ಆಂಬುಲೆನ್ಸ್, ಕ್ರೇನ್, ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಟೋಲ್ ಗೇಟ್ ಬಳಿ ಹೊಂದಿರಬೇಕು ಎಂಬುದು ನಿಯಮವಾಗಿದೆ.

ಅದೇ ರೀತಿ ಅರುವತ್ತು ಕಿಲೋಮೀಟರಿಗೆ ಒಂದರಂತೆ ಟೋಲ್ ಗೇಟ್ ಇರಬೇಕು ಎಂಬ ನಿಯಮವೂ ಇದೆ. ಆದರೆ ಸದ್ರಿ ಟೋಲ್ ನಲ್ಲಿ ಹೆದ್ದಾರಿ ಪ್ರಾಧಿಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಟೋಲ್ ಸಂಗ್ರಹ ನಡೆಸಲಾಗುತ್ತದೆ.

ಆದ್ದರಿಂದ ಈ ರಸ್ತೆಯಲ್ಲಿ ಟೋಲ್ ಗೇಟನ್ನು ತಕ್ಷಣದಿಂದ ಮುಚ್ಚುವ ತೀರ್ಮಾನವನ್ನು ಹೆದ್ದಾರಿ ಪ್ರಾಧಿಕಾರ ಕೂಡಲೇ ಕೈಗೊಳ್ಳಬೇಕು. ಈ ಬಗ್ಗೆ ಹಲವು ಬಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಮುಂದುವರಿದ ಭಾಗವಾಗಿ ಟೋಲ್ ಚಲೋ ಪ್ರತಿಭಟನೆ ನಡೆಸಿ ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿರುತ್ತೇವೆ .ಇದೀಗ ಮಾನ್ಯ ಜಿಲ್ಲಾಧಿಕಾರಿಯಾದ ತಮ್ಮ ಗಮನಕ್ಕೆ ತಂದು ಬ್ರಹ್ಮರಕೊಟ್ಲು ಟೋಲ್ ಗೇಟನ್ನು ಮುಚ್ಚುವಂತೆ ಒತ್ತಾಯಿಸುತ್ತಿದ್ದೇವೆ .ತಾವುಗಳು ಸರಕಾರದ ಗಮನಕ್ಕೆ ತಂದು ಈ ಅವೈಜ್ಞಾನಿಕ ಟೋಲ್ ಗೇಟನ್ನು ಬಂದ್ ಮಾಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ನಗರ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲ್ಕಟ್ಟೆ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಇಕ್ಬಾಲ್ ಇಝಾನ್ ಉಪಸ್ಥಿತರಿದ್ದರು.

About The Author

Leave a Reply