
ಮುಂಬೈ : 2000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ. 98.18 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ಕೇವಲ 6,471 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ(ಮಾ.01) ಮಾಹಿತಿ ನೀಡಿದೆ. 2023ರ ಮೇ 19ರಂದು 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುತ್ತಿರುವುದಾಗಿ ಆರ್‌ಬಿಐ ಘೋಷಿಸಿತ್ತು.



ಮೇ 19, 2023 ರಂದು ವ್ಯವಹಾರ ಮುಕ್ತಾಯದ ಸಮಯದಲ್ಲಿ 3.56 ಲಕ್ಷ ಕೋಟಿ ರೂ.ಗಳಷ್ಟಿದ್ದ ಚಲಾವಣೆಯಲ್ಲಿರುವ 2000 ರೂ. ನೋಟುಗಳ ಒಟ್ಟು ಮೌಲ್ಯವು ಫೆಬ್ರವರಿ 28, 2025 ರಂದು ವ್ಯವಹಾರ ಮುಕ್ತಾಯದ ಸಮಯದಲ್ಲಿ 6,471 ಕೋಟಿ ರೂ.ಗಳಿಗೆ ಇಳಿದಿದೆ ಎಂದು RBI ತಿಳಿಸಿದೆ. 2023ರ ಅ.7 ರಲ್ಲಿ ನೋಟು ಹಿಂಪಡೆಯುವ ನಿರ್ಧಾರವನ್ನು RBI ಮಾಡಿತ್ತು. ಎಲ್ಲಾ ಬ್ಯಾಂಕುಗಳ ಪ್ರತೀ ಶಾಖೆಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಮರಳಿ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.ಈ ವೇಳೆ ನೋಟನ್ನು ಬ್ಯಾಂಕ್‌ಗೆ ಜಮೆ ಮಾಡಲು ಅಥವಾ ಇತರ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈಗಲೂ ಈ ಸೌಲಭ್ಯ ಮುಂದುವರಿದಿದೆ. ರಿಸರ್ವ್ ಬ್ಯಾಂಕ್‌ನ 19 ಸೂಚಿತ ಕಚೇರಿಗಳಲ್ಲಿ ಈ ನೋಟುಗಳನ್ನು ಮರಳಿ ಪಡೆಯಲಾಗುತ್ತಿದೆ. ಬ್ಯಾಂಕ್ ಮಾತ್ರವಲ್ಲದೇ, ಸಾರ್ವಜನಿಕರು ಇಂಡಿಯಾ ಪೋಸ್ಟ್ ಮೂಲಕ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ.