
ಫೆಬ್ರವರಿ 23 ರಂದು ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ್ ಪರ ಅರ್ಧಶತಕ ಬಾರಿಸಿದ ಏಕೈಕ ಬ್ಯಾಟರ್ ಸೌದ್ ಶಕೀಲ್. ಟೀಮ್ ಇಂಡಿಯಾ ಬೌಲರ್ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಸೌದ್ 76 ಎಸೆತಗಳಲ್ಲಿ 62 ರನ್ ಬಾರಿಸಿದ್ದರು. ಇದೀಗ ಇದೇ ಸೌದ್ ಶಕೀಲ್ ಟೈಮ್ ಔಟ್ನಿಂದ ಸುದ್ದಿಯಾಗಿದ್ದಾರೆ.



ಪಂದ್ಯದ ವೇಳೆ ನಿದ್ರೆಗೆ ಜಾರಿ ಬ್ಯಾಟರ್ರೊಬ್ಬರು ಔಟಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅದು ಸಹ ಅಂತಾರಾಷ್ಟ್ರೀಯ ಕ್ರಿಕೆಟಿಗ ಸೌದ್ ಶಕೀಲ್ ಎಂಬುದೇ ಅಚ್ಚರಿ. ಇದೇ ಸೌದ್ ಶಕೀಲ್ ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ದೇಶೀಯ ಅಂಗಳದಲ್ಲಿ ನಡೆದ ಪಂದ್ಯದ ವೇಳೆ ನಿದ್ದೆಗೆ ಜಾರಿದ್ದರಿಂದ ಟೈಮ್ ಔಟ್ ಆಗಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪ್ರಥಮ ದರ್ಜೆ ಟೂರ್ನಿ ಪ್ರೆಸಿಡೆಂಟ್ಸ್ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ್ ಟೆಲಿವಿಷನ್ (ಪಿಟಿವಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎಸ್‌ಬಿಪಿ) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದುಕೊಂಡಿತ್ತು.
ಆರಂಭಿಕರಾದ ಇಮ್ರಾನ್ ಬಟ್ 89 ರನ್ ಬಾರಿಸಿದರೆ, ಮತ್ತೊಂದೆಡೆ ರಮೀಝ್ ಅಝೀಝ್ 40 ರನ್ ಕಲೆಹಾಕಿದ್ದರು. ಅತ್ತ ತಂಡವು ಉತ್ತಮ ಆರಂಭ ಪಡೆದಿದ್ದರಿಂದ ಡಗೌಟ್ನಲ್ಲಿದ್ದ ಸೌದ್ ಶಕೀಲ್ಗೆ ನಿದ್ರೆಗೆ ಜಾರಿದ್ದಾರೆ. ಆದರೆ ಆ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿತು.
ರಮೀಝ್ ಅಝೀಝ್ ಔಟಾದ ಬಳಿಕ ಕಣಕ್ಕಿಳಿದ ನಾಯಕ ಉಮರ್ ಅಮೀನ್ 6 ರನ್ಗಳಿಸಿ ಪೆವಿಲಿಯನ್ಗೆ ಹಿಂತಿರುಗಿದ್ದರು. ಇದರ ಬೆನ್ನಲ್ಲೇ ಫವಾದ್ ಆಲಂ ಮೊದಲ ಎಸೆತದಲ್ಲೇ ಮೊಹಮ್ಮದ್ ಶೆಹಝಾದ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಅತ್ತ ಗಾಢ ನಿದ್ದೆಯಲ್ಲಿದ್ದ ಸೌದ್ ಶಕೀಲ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಅವರು ಪ್ಯಾಡ್, ಹೆಲ್ಮೆಟ್, ಗ್ಲೌಸ್ಗಳೊಂದಿಗೆ ರೆಡಿಯಾಗಿರಲಿಲ್ಲ. ಹೀಗಾಗಿ ನಿದ್ದೆಯಿಂದ ಎದ್ದು ರೆಡಿಯಾಗಿ ಬರುವಷ್ಟರಲ್ಲಿ ತಡವಾಗಿದೆ.
ಸಮಯ ಮೀರಿ ಕ್ರೀಸ್ಗೆ ಆಗಮಿಸಿದ ಸೌದ್ ಶಕೀಲ್ ವಿರುದ್ಧ ಪಿಟಿವಿ ತಂಡದ ನಾಯಕ ಅಮದ್ ಬಟ್ ಮೇಲ್ಮನವಿ ಸಲ್ಲಿಸಿದ್ದಾರೆ. ಈ ವೇಳೆ ಸೌದ್ ಶಕೀಲ್ಗೆ ಕ್ರೀಸ್ಗೆ ಬರಲು 2 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿರುವುದು ಗೊತ್ತಾಗಿದೆ. ಹೀಗಾಗಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಿಯಮದ ಪ್ರಕಾರ, ಬ್ಯಾಟರ್ರೊಬ್ಬರು ಔಟಾಗಿ ಪೆವಿಲಿಯನ್ ಸೇರಿದ 2 ನಿಮಿಷಗಳ ಒಳಗೆ ಹೊಸ ಬ್ಯಾಟರ್ ಕ್ರೀಸ್ನಲ್ಲಿರಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಫೀಲ್ಡಿಂಗ್ ತಂಡ ಟೈಮ್ ಔಟ್ಗಾಗಿ ಮನವಿ ಸಲ್ಲಿಸಬಹುದು.
ಅದರಂತೆ ಸೌದ್ ಶಕೀಲ್ ವಿರುದ್ಧ ಟೈಮ್ ಔಟ್ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ನಿದ್ದೆಯಿಂದ ಎದ್ದು ಬಂದ ಸೌದ್ ಶಕೀಲ್ ಅವರನ್ನು ಬಂದ ವೇಗದಲ್ಲೇ ಮತ್ತೆ ಪೆವಿಲಿಯನ್ಗೆ ಕಳುಹಿಸಿದ್ದಾರೆ.
ಹೀಗೆ ಔಟಾಗುವುದರೊಂದಿಗೆ ಪಾಕಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲೇ ಟೈಮ್ ಔಟ್ ಆದ ಮೊದಲ ಆಟಗಾರನೆಂಬ ಅಪಕೀರ್ತಿ ಸೌದ್ ಶಕೀಲ್ ಪಾಲಾಗಿದೆ. ಅದರಲ್ಲೂ ನಿದ್ರೆಗೆ ಜಾರಿ ಆಟಗಾರನೊಬ್ಬ ಟೈಮ್ ಔಟ್ ಆಗಿರುವುದು ಇದೇ ಮೊದಲು.