ಪೊಲೀಸರನ್ನು ಕಂಡು ಕಾಲ್ಕಿತ್ತ ಗರುಡ ಗ್ಯಾಂಗ್ ಸದಸ್ಯ ಇಸಾಕ್‌ – ಪ್ರೇಯಸಿಯ ಬಂಧನ

ಉಡುಪಿ: ನೆಲಮಂಗಲ ಪೊಲೀಸರಿಗೆ ದರೋಡೆ ಪ್ರಕರಣವೊಂದರಲ್ಲಿ ಬೇಕಾಗಿದ್ದ ಕುಖ್ಯಾತ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಬಂಧಿಸಲು ನಡೆದಿದ್ದ ಪೊಲೀಸರ ಚೇಸಿಂಗ್ ಬಳಿಕ ಆರೋಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಕಾರಿನಲ್ಲಿದ್ದ ಆತನ ಗೆಳತಿ ಸುಜೈನ್‌ (25) ಳನ್ನು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಬಂಧಿತೆ ಇಸಾಕ್ ನ ಗೆಳತಿ ಸುಜೈನ್ ಎಂದು ಗುರುತಿಸಲಾಗಿದೆ. ಕೇರಳ ಮೂಲಜ ಸುಜೈನ್ ಹಲವು ವರ್ಷಗಳಿಂದ ಉಡುಪಿ ಯಲ್ಲೇ ನೆಲೆಸಿದ್ದಳು. ಆಕೆಯ ಖರ್ಚು ವೆಚ್ಚಗಳನ್ನು ಆರೋಪಿಯೇ ನೋಡಿಕೊಳ್ಳುತ್ತಿದ್ದ ಎನ್ನ ಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ 2 ನೇ ಆರೋಪಿ ಇಸಾಕ್‌ ಪತ್ತೆಗಾಗಿ ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಸೋಮಶೇಖರ್‌ ಅವರು ಮಣಿ ಪಾಲಕ್ಕೆ ಆಗಮಿಸಿದ್ದರು.

ಜಿಲ್ಲಾಧಿಕಾರಿ ಕಚೇರಿ ರಸ್ತೆ ಬಳಿಯ ಅಪಾರ್ಟ್‌ ಮೆಂಟ್‌ ನಲ್ಲಿ ವಾಸವಿರುವ ಗೆಳತಿ ಸುಜೈನ್‌ ಮನೆಗೆ ಆರೋಪಿ ಬಂದಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಸೋಮಶೇಖರ್‌ ಮತ್ತು ನಿರೀಕ್ಷಕ ನರೇಂದ್ರ ಬಾಬು ನೇತೃತ್ವದ ತಂಡ ಸುಜೈನ್‌ ಮನೆಯನ್ನು ಪತ್ತೆ ಮಾಡಿ ಆರೋಪಿ ಹೊರಬರುವುದನ್ನೇ ಕಾಯುತ್ತಿದ್ದರು. ರಾತ್ರಿ ಸುಮಾರು 8 ಗಂಟೆಗೆ ಸುಜೈನ್‌ ಹಾಗೂ ಆಕೆಯ ತಂಗಿ ಹತ್ತಿರದ ಮೊಬೈಲ್‌ ಅಂಗಡಿಗೆ ಹೋಗಿದ್ದರು.

ಈ ವೇಳೆ ನಕಲಿ ನೋಂದಣಿ ಸಂಖ್ಯೆಯ ಥಾರ್ ವಾಹನದಲ್ಲಿ ಬಂದ ಆರೋಪಿ ಪೊಲೀಸರನ್ನು ನೋಡಿ ಕಾಲ್ಕೀಳಲು ಯತ್ನಿಸಿದ್ದಾನೆ, ಈ ವೇಳೆ ಆರೋಪಿಯ ಬೆನ್ನು ಬಿದ್ದ ಪೊಲೀಸರು ಚೇಸಿಂಗ್ ಮಾಡಿದ್ದಾರೆ. ಆದರೆ ಆರೋಪಿ ಕಾರನ್ನು ವೇಗವಾಗಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಾಪತ್ತೆಯಾಗಿದ್ದಾನೆ. ಆರೋಪಿಯ ಕಾರಿನಲ್ಲಿ ಬ್ಯಾಗೊಂದು ಪತ್ತೆಯಾಗಿದ್ದು, ಅದರಲ್ಲಿ ತಲ್ವಾರು, ಕತ್ತಿ, ಮಾದಕ ವಸ್ತುಗಳ ಸಹಿತ ಸುಮಾರು 10ರಿಂದ 15 ನಿಷ್ಕ್ರಿಯ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿವೆ. ಪೊಲೀಸರು ಇವೆಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.

Leave a Reply