
ಮಂಗಳೂರು: ಕೆಲ ದಿನಗಳಿಂದ ಕರಾವಳಿಯಲ್ಲಿ ಉರಿ ಬಿಸಿಲಿನ ಧಗೆಗೆ ಜನರು ಬೆಂದು ಹೋಗಿದ್ದರು. ಒಮ್ಮೆ ಮಳೆ ಬರುತ್ತಿದ್ದರೆ ಸಾಕು ಅಂತ ಬೇಡುತ್ತಿದ್ದರು. ಕೊನೆಗೂ ನಿನ್ನೆ ಏಕಾಏಕಿ ಸುರಿದ ಮಳೆಗೆ ಭೂಮಿ ತಂಪಾಗಿದೆ. ಮಳೆಯ ಆರ್ಭಟದಿಂದಾಗಿ ವಿಮಾನಗಳು ಲ್ಯಾಂಡ್ ಆಗುವ ಸ್ಥಳವನ್ನು ಬದಲಾಯಿಸುವ ಪ್ರಮೇಯ ಕೂಡಾ ಒದಗಿ ಬಂದಿದೆ.



ಮಂಗಳೂರಿನ ಬಜಪೆ ವಲಯದಲ್ಲಿ ಇರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದಲ್ಲಿ ವಿಮಾನಗಳನ್ನು ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ. ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅಷ್ಟು ಮಾತ್ರವಲ್ಲದೆ, ಹಲವೆಡೆ ಮರ ಬಿದ್ದಂತೆ ಅನೇಕ ವಿದ್ಯುತ್ ಕಂಬಗಳೂ ಕೂಡಾ ಧರಾಶಾಹಿಯಾಗಿದೆ.
ದ.ಕ ಜಿಲ್ಲೆಯಲ್ಲಿ ತೀವ್ರ ಗಾಳಿ ಮತ್ತು ಸಾಧಾರಣ ಮಳೆಯಿತ್ತು. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಕೂಡಾ ಆಗಿದೆ.