November 24, 2025
WhatsApp Image 2025-03-15 at 5.19.58 PM

ಮಂಗಳೂರು: ಚಿಕ್ಕಮಗಳೂರಿನ ತೇಗೂರು ಗ್ರಾಮದ ಡಾ. ಅಬ್ದುಲ್​ ಕಲಾಂ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ವಸತಿ ಶಾಲೆಯ 9ನೇ ತರಗತಿಯ ಬಾಳೆಹೊನ್ನೂರು ಮೂಲದ ಯಶ್ವಿತ್ ಸಾಲಿಯಾನ್​​​ ಮತ್ತು ಬೆಂಗಳೂರು ಮೂಲದ ತರುಣ್‌ ಮಾರ್ಚ್​ 3ರಂದು ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.ಯಶ್ವಿತ್ ಮತ್ತು ತರುಣ್ ಉತ್ತಮ ಸ್ನೇಹಿತರಾಗಿದ್ದು, ಓದಿನಲ್ಲಿ ಆಸಕ್ತಿ ಇಲ್ಲದಿದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು.‌ 9ನೇ ತರಗತಿ ಪರೀಕ್ಷೆ ಮುಗಿಸಿದ ಬಳಿಕ 10ನೇ ತರಗತಿಯ ಸಿದ್ದತೆಗಾಗಿ ವಿಶೇಷ ತರಗತಿಗಳು ನಡೆಯುತ್ತಿದ್ದು, ಇದರಿಂದ ಪರೀಕ್ಷೆ ಮುಗಿದರೂ ರಜೆ ಸಿಕ್ಕಿರಲಿಲ್ಲ. ವಿಶೇಷ ತರಗತಿ ಮುಗಿಸಿ ರೂಮ್ ಸೇರಿದ ಇಬ್ಬರು ಮೊದಲೇ ಮಾಡಿದ ಪ್ಲಾನ್​ನಂತೆ ವಸತಿ ಶಾಲೆಯ ಕಾಂಪೌಂಡ್ ಹಾರಿ 5 ಕಿಮೀ ನಡೆದು ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್​ ಹತ್ತಿ ಮಂಗಳೂರಿಗೆ ಬಂದಿದ್ದರು.

ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು, ವಿದ್ಯಾರ್ಥಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ತನಿಖೆ ಶುರು ಮಾಡಿದ್ದರು. ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್​ಗಾಗಿ ಕಾಯುತ್ತಿರುವ ದೃಶ್ಯ ಕಂಡಿದೆ. ಬಳಿಕ ಇಬ್ಬರೂ ಬೆಂಗಳೂರು ಬಸ್​ ಹತ್ತಿರುವ ಮಾಹಿತಿ ಆಧಾರದ ಮೇಲೆ ಪೊಲೀಸರು ಬೆಂಗಳೂರಿನ ಹುಡುಕಾಟ ನಡೆಸಿದ್ದಾರೆ. ಅದೇ ರೀತಿ ಮಂಗಳೂರಿನಲ್ಲೂ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.

About The Author

Leave a Reply