November 8, 2025
WhatsApp Image 2025-03-16 at 1.15.17 PM
ಮಂಗಳೂರು: ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು (ಡ್ರಗ್ಸ್) ಸೀಜ್ ಮಾಡಿದ್ದಾರೆ ಮಂಗಳೂರು ಪೊಲೀಸರು. ಸುಮಾರು 75 ಕೋಟಿ ರೂಪಾಯಿಗಳ ಮೌಲ್ಯದ 37.87 ಕಿಲೋಗ್ರಾಂ ಎಂಡಿಎಂಎ (MDMA) ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಾದಕ ವಸ್ತುಗಳನ್ನು ರಾಜ್ಯದ ವಿವಿಧ ಭಾಗಗಳು ಮತ್ತು ಇತರ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ನಾಗರಿಕರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬಂಧಿತರಾಗಿರುವವರು ದಕ್ಷಿಣ ಆಫ್ರಿಕಾದ ನಾಗರಿಕರಾದ ಬಂಬಾ ಫಂಟಾ (31) ಮತ್ತು ಅಬಿಗೈಲ್ ಅಡೊನಿಸ್ (30) ಎಂಬ ಇಬ್ಬರು. ಇವರು ದೇಶದ ವಿವಿಧ ಭಾಗಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಸಿಸಿಬಿ ಪೊಲೀಸರ ದೀರ್ಘ ತನಿಖೆ: ಈ ಘಟನೆಗೆ ಮುಂಚೆ, 2024ರಲ್ಲಿ ಪಂಪ್ ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೈದರ್ ಆಲಿ ಎಂಬಾತನನ್ನು ಬಂಧಿಸಲಾಗಿತ್ತು. ಅವನಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ನೈಜೀರಿಯಾದ ನಾಗರಿಕ ಪೀಟರ್ ಇಕೆಡಿ ಬೆಲೊನ್ವೊ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಅವನಿಂದ 6.248 ಕಿಲೋಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.ಈ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಆರು ತಿಂಗಳ ಕಾಲ ನಡೆಸಿದ ತನಿಖೆಯಲ್ಲಿ ಈ ದೊಡ್ಡ ಮಾದಕ ವಸ್ತುಗಳ ಜಾಲವನ್ನು ಬಹಿರಂಗಪಡಿಸಿದ್ದಾರೆ. ತನಿಖೆಯ ಸಮಯದಲ್ಲಿ, ದೆಹಲಿಯಿಂದ ಬೆಂಗಳೂರು ಮತ್ತು ದೇಶದ ಇತರ ಭಾಗಗಳಿಗೆ ವಿಮಾನ ಮಾರ್ಗದ ಮೂಲಕ ಎಂಡಿಎಂಎ ಪೂರೈಕೆ ಮಾಡಲಾಗುತ್ತಿದ್ದ ಮಾಹಿತಿ ಪೊಲೀಸರಿಗೆ ದೊರಕಿತ್ತು.ಬೆಂಗಳೂರಿನಲ್ಲಿ ಬಂಧನ: ಮಾರ್ಚ್ 14ರಂದು, ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ನಾಗರಿಕರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಬಂಧಿಸಲಾಯಿತು. ಅವರ ಬಳಿಯಿದ್ದ ಎರಡು ಟ್ರಾಲಿ ಬ್ಯಾಗ್ಗಳಲ್ಲಿ 37.585 ಕಿಲೋಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ನಾಲ್ಕು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಮಾದಕ ವಸ್ತುಗಳ ಮಾರುಕಟ್ಟೆ ಮೌಲ್ಯ ಸುಮಾರು 75 ಕೋಟಿ ರೂಪಾಯಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

About The Author

Leave a Reply