ಮಂಗಳೂರು: ದೇವರು ಮತ್ತು ನನ್ನ ಜನರು ಇಚ್ಛಿಸಿದರೆ ಮತ್ತೆ ಸಚಿವನಾಗುವೆ- ಯು.ಟಿ. ಖಾದರ್

ಮಂಗಳೂರು: “ನನ್ನ ರಾಜಕೀಯ ಜೀವನದಲ್ಲಿ ಎಂದೂ ಹುದ್ದೆಗಳ ಬಗ್ಗೆ ಆಸೆ ಇಟ್ಟುಕೊಂಡವನಲ್ಲ. ದೇವರ ಕೃಪೆ ಮತ್ತು ನನ್ನ ಕ್ಷೇತ್ರದ ಜನರ ಆಶೀರ್ವಾದದಿಂದ ಈ ಹಂತಕ್ಕೆ ಬಂದಿದ್ದೇನೆ. ದೇವರು ಮತ್ತು ನನ್ನ ಜನರು ಇಚ್ಛಿಸಿದರೆ, ಇನ್ನೂ ದೊಡ್ಡ ಹುದ್ದೆ ಸಿಗಬಹುದು. ಮತ್ತೆ ಸಚಿವನಾಗಲೂ ಸಾಧ್ಯ,” ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಶನಿವಾರ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, “ನಾನು ಮಾಡಿದ ಕೆಲಸದಿಂದಲೇ ಈ ಹುದ್ದೆ ಸಿಕ್ಕಿದೆ. ನಾನು ನಿರಂತರವಾಗಿ ಜನಸೇವೆ ಮಾಡುತ್ತೇನೆ. ನನ್ನ ವಿರೋಧಿಗಳಿಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ನನ್ನ ವಿರುದ್ಧ ಹೇಳುವ ಸುಳ್ಳು ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ,” ಎಂದರು.

ಕರಾವಳಿಗೆ ಪ್ರಾಶಸ್ತ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ಬಜೆಟ್ನಲ್ಲಿ ಕರಾವಳಿ ಪ್ರದೇಶಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಉಳ್ಳಾಲದಲ್ಲಿ ವಸತಿ ಸಹಿತ ಸರಕಾರಿ ಮಹಿಳಾ ಪಿಯು ಕಾಲೇಜಿಗೆ ಅನುಮೋದನೆ ಸಿಕ್ಕಿದೆ. ಇದನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ನೇತ್ರಾವತಿ ನದಿಗೆ ಎರಡು ಹೊಸ ಸೇತುವೆಗಳ ನಿರ್ಮಾಣ, ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್, ವಾಟರ್ ಮೆಟ್ರೋ, ಮೀನುಗಾರಿಕೆ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಪಿಲಿಕುಳದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್ನಲ್ಲಿ ಸೇರಿಸಲಾಗಿದೆ ಎಂದು ಖಾದರ್ ತಿಳಿಸಿದರು.

ಸೌಹಾರ್ದಯುತ ಪರಿಹಾರ:
ಸಣ್ಣ-ಪುಟ್ಟ ಗೊಂದಲಗಳನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು ಎಂದು ಖಾದರ್ ಹೇಳಿದರು. “ಉದ್ರೇಕಕಾರಿ ಭಾಷಣಗಳಿಗೆ ಪ್ರತಿಕ್ರಿಯೆ ನೀಡಬಾರದು. ಫರಂಗಿಪೇಟೆಯಲ್ಲಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗಿದೆ. ಇದೇ ರೀತಿ ಕೊರಗಜ್ಜ ಕ್ಷೇತ್ರದ ನಡೆಯ ಸಂದರ್ಭದಲ್ಲೂ ಹೊರಗಿನಿಂದ ಬಂದ ಕೆಲವರು ಅಪ್ರಬುದ್ಧ ಮಾತುಗಳನ್ನಾಡಿದ್ದಾರೆ. ಅಂಥವರ ವಿರುದ್ಧ ಕಾನೂನು ಸಲಹೆ ಪಡೆದು, ಎಸ್.ಪಿ ಕ್ರಮ ಕೈಗೊಳ್ಳುವರು,” ಎಂದರು.

ಗಡಿ ಪ್ರದೇಶದಲ್ಲಿ ಎಐ ಲೇಸರ್ ಕ್ಯಾಮರಾ:
ಜಿಲ್ಲೆಯಲ್ಲಿ ಕೇರಳದೊಂದಿಗೆ 20 ಕಡೆ ಸಂಪರ್ಕ ರಸ್ತೆಗಳಿವೆ. ಗಡಿ ಪ್ರದೇಶದಲ್ಲಿ ಎಐ ಲೇಸರ್ ಕ್ಯಾಮರಾ ಅಳವಡಿಸಲಾಗುವುದು ಎಂದು ಖಾದರ್ ತಿಳಿಸಿದರು. ಇದರಿಂದ ಗಡಿ ಪ್ರದೇಶದ ಸುರಕ್ಷತೆ ಹೆಚ್ಚುತ್ತದೆ ಎಂದು ಅವರು ಹೇಳಿದರು.

Leave a Reply