August 30, 2025
WhatsApp Image 2025-03-16 at 1.15.17 PM
ಮಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶ ಪ್ರಕರಣದ ತನಿಖೆಗೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ದಿಲ್ಲಿಗೆ ತೆರಳಲಿದ್ದಾರೆ.
ಪೊಲೀಸರು ಬಂಧಿತ ಆರೋಪಿಗಳಾಗಿರುವ ಬಂಬಾ ಫಾಂಟಾ ಅಲಿಯಾಸ್‌ ಅಡೊನಿಸ್‌ ಜಬುಲೈಲ್‌ ಮತ್ತು ಒಲಿಜೊ ಇವನ್ಸ್‌ ಆಲಿಯಾಸ್‌ ಅಬಿಗೈಲ್‌ ಅಡೊನಿಸ್‌ಳನ್ನು ಅವರನ್ನು ಕೂಡ ಜತೆಗೆ ಕರೆದೊಯ್ಯಲಿದ್ದಾರೆ.
ಆರೋಪಿಗಳು ದಿಲ್ಲಿಯಲ್ಲಿ ವಾಸವಿದ್ದ ಸ್ಥಳವನ್ನು ಪೊಲೀಸರು ದೃಢೀಕರಿಸಿಕೊಳ್ಳಲಿದ್ದಾರೆ. ಅವರು ಅಕ್ರಮವಾಗಿ ವಾಸವಾಗಿದ್ದರೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ಆರೋಪಿಗಳನ್ನು ದಿಲ್ಲಿ ವಿಮಾನ ನಿಲ್ದಾಣಕ್ಕೂ ಕರೆದೊಯ್ಯುವ ಸಾಧ್ಯತೆ ಇದೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಪಾಸಣೆಯಲ್ಲಿ ಲೋಪವಾಗಿದೆಯೇ ಅಥವಾ ಡ್ರಗ್ಸ್‌ ಸಾಗಾಟ ದಂಧೆಯಲ್ಲಿ ವಿಮಾನ ನಿಲ್ದಾಣ ಅಥವಾ ಏರ್‌ಲೈನ್ಸ್‌ನವರು ಶಾಮೀಲಾಗಿದ್ದಾರೆಯೇ ಎಂಬ ಸಂಶಯಗಳೂ ಈಗ ಬಲವಾಗುತ್ತಿವೆ.
ಆರೋಪಿಗಳಿಗೆ ಪರಸ್ಪರ ಸಂಬಂಧ ಇಲ್ಲದಿರುವುದು ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸವಾಲಾಗುತ್ತಿದೆ. ಆರೋಪಿಗಳು ಒಬ್ಬರಿಗೊಬ್ಬರು ಸಂಪರ್ಕವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರು ತಿಂಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿರುವ ಹೈದರ್‌ ಅಲಿ, ಪೀಟರ್‌ ಹಾಗೂ ಈಗ ಬಂಧಿಸಲ್ಪಟ್ಟಿರುವ ಇಬ್ಬರು ಆಫ್ರಿಕನ್‌ ಮಹಿಳೆಯರ ನಡುವಿನ ಸಂಬಂಧವನ್ನು ಪತ್ತೆ ಹಚ್ಚುವುದು ಇನ್ನು ಕೂಡ ಪೊಲೀಸರಿಗೆ ಸವಾಲಾಗಿದೆ. ಕಿಂಗ್‌ಪಿನ್‌ಗಳು ನೀಡಿದ ಡ್ರಗ್ಸ್‌ ಅನ್ನು ಆಫ್ರಿಕನ್‌ ಮಹಿಳೆಯರು ಕ್ಯಾರಿಯರ್‌ಗಳಾಗಿ ಸಾಗಿಸಿ ಕಿಂಗ್‌ಪಿನ್‌ನ ಸೂಚನೆಯಂತೆ ನಿರ್ದಿಷ್ಟ ವ್ಯಕ್ತಿಗಳಿಗೆ ಹಸ್ತಾಂತರಿಸುತ್ತಾರೆ. ಅನಂತರ ಕೆಳ ಹಂತದ ಪೆಡ್ಲರ್‌ಗಳು ವ್ಯವಹರಿಸುತ್ತಾರೆ. ಇಲ್ಲಿ ಇವರ ನಡುವೆ ನೇರ ಸಂಪರ್ಕ ಇರುವುದಿಲ್ಲ. ಕೇವಲ ಡ್ರಗ್ಸ್‌ ಕೈ ಬದಲಾಗುತ್ತಾ ಹೋಗುತ್ತದೆ. ಎಲ್ಲವನ್ನೂ ಕಿಂಗ್‌ಪಿನ್‌ಗಳು ಮತ್ತು ಅವರ ಕೋ ಆರ್ಡಿನೇಟರ್‌ಗಳು ನಿರ್ವಹಿಸುತ್ತಾರೆ ಎನ್ನಲಾಗಿದೆ. ಈ ಎಲ್ಲ ಸವಾಲುಗಳನ್ನು ಭೇದಿಸುವ ಹೊಣೆಯನ್ನು ಸಿಸಿಬಿ ತಂಡಕ್ಕೆ ಪೊಲೀಸ್‌ ಆಯುಕ್ತರು ನೀಡಿದ್ದಾರೆ.

About The Author

Leave a Reply