
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಪತ್ರಕರ್ತ ಹಾವಳಿ ಜಾಸ್ತಿಯಾಗಿದ್ದು, ಕೆಲವರು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ತಯಾರಿಸಿ ಬಳಸುತ್ತಿದ್ದಾರೆ.



ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಲಿ ಪತ್ರಕರ್ತರಿಗೂ ಇವರನ್ನು ಪತ್ತೆ ಮಾಡುವುದು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದ್ದು. ಇಂತವರಿಂದ ಪತ್ರಕರ್ತರ ಹೆಸರಿಗೆ ಮಸಿ ಬಳಿಯುವ ಕೃತ್ಯಗಳು ನಡೆಯುತ್ತಿದೆ ಅನ್ನೋದನ್ನು ಅಲ್ಲಗಳೆಯುವಂತಿಲ್ಲ. ನಿನ್ನೆ ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತದ ಬಳಿ ನಡೆದ ಸರಣಿ ಅಪಘಾತ ಮಾಡಿದ ಕಾರಿನಲ್ಲಿ ನಕಲಿ ಐಡಿಯೊಂದು ಪತ್ತೆಯಾಗಿದೆ. ಅಪಘಾತವಾದ ತಕ್ಷಣವೇ ಕಾರಿನಿಂದ ಇಳಿದಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಆತನ ಐಡಿ ಕಾರ್ಡ್ ಮೂಲಕ ಆತನ ಹೆಸರು ರಾಜಶೇಖರ್ ಎಂದು ಗುರುತಿಸಲಾಗಿದ್ದು ಪ್ರತಿಷ್ಠಿತ ಮುದ್ರಣ ಸಂಸ್ಥೆಯಲ್ಲಿ ಉಪ ಸಂಪಾದಕ ಎಂದು ಐಡಿಯಲ್ಲಿ ನಮೂದಿಸಲಾಗಿದೆ.
ಆದ್ರೆ ಆ ಮುದ್ರಣ ಸಂಸ್ಥೆಯಲ್ಲಿ ಅಂತಹ ಹೆಸರಿನ ಯಾರೂ ಕೂಡಾ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಕರ್ತರ ಹೆಸರು ದುರ್ಬಳಕೆ ತಡೆಯುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಮಪತ್ ಅಗರ್ವಾಲ್ ಅವರನ್ನು ಭೇಟಿಯಾದ ಜಿಲ್ಲಾ ಪತ್ರಕರ್ತರ ಸಂಘದ ನಿಯೋಗ, ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ ತಡೆ ಮತ್ತು ಪತ್ರಕರ್ತರು ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ಭದ್ರತೆ ಖಾತ್ರಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಗರ ಪೋಲಿಸ್ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನಗರದಲ್ಲಿ ಕಾರ್ ಹಾಗೂ ಬೈಕ್ ನಲ್ಲಿ ಲಗತ್ತಿಸಿರುವ ಸ್ಟೀಕರ್ ಗಳನ್ನು ಪರಿಶೀಲಿಸಲು ಸಂಚಾರಿ ಪೋಲಿಸರಿಗೆ ಸೂಚನೆ ನೀಡಿದ್ದಾರೆ