August 30, 2025
WhatsApp Image 2025-03-24 at 9.24.39 AM

ನೇಜಾರಿನಲ್ಲಿ 2023ರಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಕೋರಿ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.

ಆರೋಪಿ ಪ್ರವೀಣ್ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡಬೇಕೆಂಬ ಬ್ಯಾಂಕಿನವರ ಅರ್ಜಿಯ ಕುರಿತ ಅಂತಿಮ ಆದೇಶವನ್ನು ವಿಚಾರಣೆ ಮುಗಿಯುವವರೆಗೆ ನ್ಯಾಯಾಲಯ ಕಾಯ್ದಿರಿಸಿದೆ. ಕಾರನ್ನು ಬ್ಯಾಂಕಿನವರಿಗೆ ನೀಡಿದರೆ, ಮುಂದೆ ಅವರು ಅದನ್ನು ಮಾರಾಟ ಮಾಡಿದರೆ ಸಾಕ್ಷ್ಯ ವಿಚಾರಣೆಗೆ ತೊಂದರೆ ಆಗುತ್ತದೆ ಎಂಬುದಾಗಿ ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಮುಂದಿನ ವಿಚಾರಣೆಯನ್ನು ಎಪ್ರಿಲ್ 3ಕ್ಕೆ ನಿಗದಿಪಡಿಸಿ ನ್ಯಾಯಾಧೀಶ ಸಮಿವುಲ್ಲಾ ಆದೇಶ ನೀಡಿದ್ದಾರೆ.

ಅಂದು ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗುತ್ತದೆ. ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಪ್ರಕರಣದ ಹಿನ್ನೆಲೆ: ನೇಜಾರಿನ ತೃಪ್ತಿ ಲೇಔಟ್‌ನಲ್ಲಿ 2023ರ ನವೆಂಬರ್ 12ರಂದು ಬೆಳಗ್ಗೆ ಹಸೀನಾ (48), ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಜ್ (20) ಹಾಗೂ 14 ವರ್ಷದ ಅಪ್ರಾಪ್ತ ಮಗನನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಚೂರಿ ಇರಿತಕ್ಕೊಳಗಾಗಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಅವಿತು ಜೀವ ಉಳಿಸಿಕೊಂಡಿದ್ದರು.

About The Author

Leave a Reply