
ಮಂಗಳೂರು: ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.



ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈ ಕೆಳಗಿನಂತಿದೆ.
‘ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರಿನಿಂದ ಹದಿನೇಳು ಕಿಲೋಮೀಟರ್ ಅಂತರದಲ್ಲಿ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಟು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಪ್ಲಾಝ ಕಳೆದ ಹನ್ನೆರಡು ವರ್ಷಗಳಿಂದ ವಾಹನಗಳಿಂದ ಟೋಲ್ ಸಂಗ್ರಹ ನಡೆಸುತ್ತಿದೆ. ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಟೋಲ್ ಸಂಗ್ರಹ ಮಾಡುವ ರಸ್ತೆಗಳು ಸುಸ್ಥಿತಿ ಮತ್ತು ಸಮರ್ಪಕ ಆಗಿರಬೇಕು. ಆದರೆ ಮಂಗಳೂರಿನಿಂದ ಸದ್ರಿ ಟೋಲ್ ವರೆಗಿನ ರಸ್ತೆಗಳಲ್ಲಿ ಬೀದಿ ದೀಪ, ಸಿಗ್ನಲ್, ನಾಮಫಲಕ, ಪಾದಚಾರಿಗಳ ಮೇಲೇತುವೆ ಅಥವಾ ಅಂಡರ್ ಪಾಸ್, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ರಸ್ತೆಯಲ್ಲಿ ಟೋಲ್ ಸಂಗ್ರಹ ನಡೆಸುತ್ತಿರುವುದು ಹೆದ್ದಾರಿ ಪ್ರಾಧಿಕಾರ ನಿಯಮದ ಉಲ್ಲಂಘನೆಯಾಗಿದೆ. ಈ ವಿಚಾರದ ಬಗ್ಗೆ SDPI ಪಕ್ಷದ ವತಿಯಿಂದ ಅಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ ನಿವೇದನೆಗಳನ್ನು ಸಲ್ಲಿಸಿದ್ದೇವೆ ಹಾಗೂ ಸದ್ರಿ ಟೋಲ್ ಗೇಟನ್ನು ಮುಚ್ಚುವಂತೆ ಪ್ರತಿಭಟನೆ, ಧರಣಿ ಸತ್ಯಾಗ್ರಹ, ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ. ಅದೇ ರೀತಿ ಜಿಲ್ಲೆಯ ಹಲವಾರು ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಟೋಲ್ ತೆರವುಗೊಳಿಸಬೇಕೆಂದು ನಿರಂತರವಾಗಿ ಆಗ್ರಹಿಸುತ್ತಲೇ ಇದೆ. ಆದರೆ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮುತುವರ್ಜಿ ವಹಿಸದೆ ಟೋಲ್ ಸಂಗ್ರಹವನ್ನು ಮುಂದುವರೆಸಲು ಅವಕಾಶ ಮಾಡಿ ಕೊಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ವಿದ್ಯಾವಂತರು, ಸುಸಂಸ್ಕೃತರು ಮತ್ತು ರಾಜ್ಯದಲ್ಲಿ ಹೆಚ್ಚು ತೆರಿಗೆ ಪಾವತಿಸುವ ಜಿಲ್ಲೆಗಳ ಪೈಕಿಯಲ್ಲಿ ಮೊದಲ ಸಾಲಿನಲ್ಲಿರುವ ಜಿಲ್ಲೆ ನಮ್ಮದು. ಮಂಗಳೂರಿನ ಜನತೆ ಉದಾರಿಗಳು. ಅವರು ಪ್ರಶ್ನಿಸುವುದು ಕಡಿಮೆ. ಇದನ್ನೇ ಬಂಡವಾಳ ಮಾಡಿ ಟೋಲ್ ಹೆಸರಿನಲ್ಲಿ ಈ ರೀತಿ ಸುಲಿಗೆ ಮಾಡುವುದು ಅಕ್ಷಮ್ಯವಾಗಿದೆ. ಮೂಲ ಸೌಕರ್ಯಗಳಿಲ್ಲದ ಕೆಟ್ಟ ರಸ್ತೆಗೆ ಅನ್ಯಾಯವಾಗಿ ಕಳೆದ ಹನ್ನೆರಡು ವರ್ಷಗಳಿಂದ ಟೋಲ್ ಕಟ್ಟುತ್ತಿರುವ ಬಗ್ಗೆ ಜಿಲ್ಲೆಯ ಜನರು ಆಕ್ರೋಶಗೊಂಡಿದ್ದಾರೆ. ಟೋಲ್ ಸಂಗ್ರಹಿಸಲು ಬೇಕಾದ ಮಾನದಂಡಗಳಿಲ್ಲದ ಕಡೆ, ಸುದೀರ್ಘ ಕಾಲದಿಂದ ಟೋಲ್ ಸಂಗ್ರಹ ಮಾಡುವ ಮೂಲಕ ಸರಕಾರ ಜನರ ಸಹನೆ ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಇದು ಇನ್ನೂ ಮುಂದುವರೆದರೆ ಜನತೆ ಬ್ರಹ್ಮರಕೊಟ್ಟು ಟೋಲ್ ವಿರುದ್ಧ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಾದ ತಾವುಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಜನತೆಯನ್ನು ಶೋಷಿಸುತ್ತಿರುವ ಹೆದ್ದಾರಿ ಪ್ರಾಧಿಕಾರಕ್ಕೆ ಕೂಡಲೇ ಟೋಲ್ ಗೇಟ್ ಮುಚ್ಚುವಂತೆ ರಾಜ್ಯ ಸರಕಾರ ಒತ್ತಡ ಹೇರಬೇಕೆಂದು ನಾನು ಈ ಪತ್ರದ ಮೂಲಕ ತಮ್ಮಲ್ಲಿ ಆಗ್ರಹಿಸುತ್ತಿದ್ದೇನೆ.’