October 13, 2025
WhatsApp Image 2025-03-30 at 3.42.30 PM
ಮಂಗಳೂರು : ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಘಟನೆ ನಡೆದಿದೆ. ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಹೆಚ್.ಎಂ. ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಗೆ ಕೇರಳ ಮೂಲದ ಮೂವರು ಖದೀಮರು ಕನ್ನ ಹಾಕಿದ್ದಾರೆ. ಇನ್ನೇನು ಖದೀಮರು ಕಳ್ಳತನ ನಡೆಸಲು ಮಳಿಗೆಯ ಬೀಗ ಒಡೆಯುತ್ತಿರುವಾಗಲೇ ಸೈರನ್ ಮೊಳಗಿದ್ದು ಮುತ್ತೂಟ್ ಫೈನಾನ್ಸ್ ನ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದೆ. ಫೈನಾನ್ಸ್ ಸಂಸ್ಥೆಯ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್‌ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದು, ಇಬ್ಬರು ಆರೋಪಿಗಳಾದ ಕೇರಳದ ಕಾಂಞಂಗಾಡ್ ಮೂಲದ ಮುರಳಿ ಮತ್ತು ಕಾಸರಗೋಡು ನಿವಾಸಿ ಹರ್ಷದ್ ಎಂಬವರು ಕಟ್ಟಡದಲ್ಲಿ ಲಾಕ್ ಆಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳು ಮತ್ತು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನ್ ಅನ್ನು ವಶಕ್ಕೆ ಪಡೆದಿದ್ದಾರೆ.ಮತ್ತೋರ್ವ ಆರೋಪಿ ಕಾಸರಗೋಡು ಮೂಲದ ಅಬ್ದುಲ್ ಲತೀಫ್ ಪರಾರಿಯಾಗಿದ್ದಾನೆ.ಮುರಳಿ ಮತ್ತು ಅಬ್ದುಲ್ ಲತೀಫ್ ಎಂಬ ಆರೋಪಿಗಳು ಕೇರಳದಲ್ಲಿ ಈ ಹಿಂದೆ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು ಎನ್ನುವ ಮಾಹಿತಿಯಿದೆ.ಕಳೆದ ಜನವರಿ ತಿಂಗಳಲ್ಲಿ ಕೆ.ಸಿ ರೋಡಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಶಾಖೆಯಲ್ಲಿ ನಡೆದಿದ್ದ ದರೋಡೆಯು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ನಲ್ಲಿ ಉತ್ಕೃಷ್ಟ ಮಟ್ಟದ ರಕ್ಷಣಾ ಸಲಕರಣೆ ಅಳವಡಿಸಿದ ಪರಿಣಾಮ ಸಂಭವನೀಯ ದರೋಡೆ ಪ್ರಕರಣ ವಿಫಲವಾಗಿದೆ.ಘಟನಾ ಸ್ಥಳಕ್ಕೆ ಎಸಿಪಿ ಧನ್ಯಾ ನಾಯಕ್, ಕೊಣಾಜೆ ಇನ್ಸ್ ಪೆಕ್ಟ‌ರ್ ರಾಜೇಂದ್ರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

About The Author

Leave a Reply