August 30, 2025
WhatsApp Image 2025-04-18 at 9.29.21 AM

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಶುಕ್ರವಾರ (ಏ. 18) ರಂದು ಮಂಗಳೂರಿನ ಅಡ್ಯಾರ್‌ ಕಣ್ಣೂರು ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಿದ್ದು, ಈ ವೇಳೆ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ರಸ್ತೆ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಮಂಗಳೂರಿನ ರಾಜೇಶ್ ಅರ್ಕುಳ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಕ್ಫ್ ತಿದ್ದುಪಡಿ ವಿಚಾರ ಸುಪ್ರೀಂ ಕೋರ್ಟ್​ ಪರಿಗಣಿಸುವಾಗ ಪ್ರತಿಭಟನೆ ಸರಿಯಲ್ಲ. ಅದರಲ್ಲೂ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್​ಹೆಚ್ 73 ಬಂದ್ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ.

ಸರ್ಕಾರ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಸರ್ಕಾರ ಅನುಮತಿ ನೀಡುವಾಗ ಸುಪ್ರೀಂಕೋರ್ಟ್ ವಿಚಾರಣೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ‌.ರೋಡ್ ನಿಂದ ಪಡೀಲ್ ವರೆಗೆ ವಾಹನ ಸಂಚಾರ ನಿರ್ಬಂಧಿತವಾಗಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಮಂಗಳೂರು-ಬೆಂಗಳೂರು ಹೆದ್ದಾರಿ ಮಾರ್ಗದ ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ ಭಾಗಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ಉಲಮಾ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿದೆ.

About The Author

Leave a Reply