August 30, 2025
WhatsApp Image 2025-04-23 at 5.19.41 PM

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗಳ ಮೇಲೆ ದಾಳಿ ಮಾಡುತ್ತಿದ್ದಾಗ ಭಯೋತ್ಪಾದಕನ ಕೈಯಿಂದ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಕುದುರೆ ಸವಾರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪಹಲ್ಗಾಮ್ ನಲ್ಲಿ ತನ್ನ ಕುದುರೆಯ ಮೇಲೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸೈಯದ್ ಆದಿಲ್ ಹುಸೇನ್ ಷಾ ಭಯೋತ್ಪಾದಕನ ವಿರುದ್ಧ ಹೋರಾಡಿ ಹತರಾಗಿದ್ದಾರೆ.

ಸೈಯದ್ ಆದಿಲ್ ಹುಸೇನ್ ಶಾ ಕಾರು ಪಾರ್ಕಿಂಗ್ ನಿಂದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿಗೆ ಪ್ರವಾಸಿಗರನ್ನು ತನ್ನ ಕುದುರೆಯ ಮೇಲೆ ಕರೆದೊಯ್ಯುತ್ತಿದ್ದರು. ಈ ವೇಳೆ ಭಯೋತ್ಪಾದಕನೋರ್ವ ಗುಂಡಿನ ದಾಳಿ ನಡೆಸುತ್ತಿರುವುದನ್ನು ನೋಡಿದ ಅವರು ಆತನಿಂದ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದರು.

ಸೈಯದ್ ಆದಿಲ್ ಹುಸೇನ್ ಶಾ ಕುಟುಂಬ ಇದೀಗ ನ್ಯಾಯಕ್ಕಾಗಿ ಆಗ್ರಹಿಸುತ್ತಿದೆ. ಕುಟುಂಬದ ಏಕೈಕ ಆಶ್ರಯವಾಗಿದ್ದ ಆದಿಲ್ ಹುಸೇನ್ ಶಾ ಇಲ್ಲದೆ ವಯಸ್ಸಾದ ಪೋಷಕರು, ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ.

ಈ ಬಗ್ಗೆ ಆದಿಲ್ ಹುಸೇನ್ ತಂದೆ ಸೈಯದ್ ಹೈದರ್ ಶಾ ಮಾತನಾಡಿ, ʼನನ್ನ ಮಗ ನಿನ್ನೆ ಕೆಲಸ ಮಾಡಲು ಪಹಲ್ಗಾಮ್ಗೆ ಹೋಗಿದ್ದನು ಮತ್ತು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಮಗೆ ದಾಳಿಯ ಬಗ್ಗೆ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು. ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು, ನಂತರ 4.40ಕ್ಕೆ ಅವನ ಫೋನ್ ಆನ್ ಆಗಿತ್ತು, ಆದರೆ ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ತೆರಳಿದಾಗ ದಾಳಿಯಲ್ಲಿ ಆದಿಲ್ ಮೃತಪಟ್ಟಿದ್ದಾನೆ ಎಂದು ತಿಳಿಯಿತು. ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದುʼ ಆಗ್ರಹಿಸಿದ್ದಾರೆ.

About The Author

Leave a Reply