
ಮಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.



ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಬೆಳಿಗ್ಗೆ 10:30ಕ್ಕೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕ್ಲಾಕ್ ಟವರ್ ವರೆಗೆ ಪಾದಯಾತ್ರೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರು ತಲೆಯ ಮೇಲೆ ಕಟ್ಟಿಗೆ ಹೊತ್ತು ಸಾಗುವ ಮೂಲಕ ಬೆಲೆ ಏರಿಕೆಯ ಬಿಸಿಯನ್ನು ಸರ್ಕಾರದ ಗಮನಕ್ಕೆ ತಂದರು.
“ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೂಡಲೇ ಈ ಬೆಲೆ ಏರಿಕೆಯನ್ನು ಹಿಂಪಡೆಯಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಮಾನಾಥ ರೈ, “ಕೇಂದ್ರ ಸರ್ಕಾರ ಬಡವರನ್ನು ಕಡೆಗಣಿಸುತ್ತಿದೆ. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆ ಹರೀಶ್ ಕುಮಾರ್, ಬಿ ರಮಾನಾಥ್ ರೈ, ಜೆ ಆರ್ ಲೋಬೊ, ಇನಾಯತ್ ಅಲಿ, ಎಂ ಎಸ್ ಮುಹಮ್ಮದ್, ಪದ್ಮರಾಜ್ ಆರ್ ಪೂಜಾರಿ, ರಕ್ಷಿತ್ ಶಿವರಾಮ್, ಭರತ್ ಮುಂಡೋಡಿ, ಶಾಲೆಟ್ ಪಿಂಟೋ, ಇಬ್ರಾಹಿಂ ನವಾಜ್, ವಿಶ್ವಾಸ್ ದಾಸ್, ಸುಹಾನ್ ಆಳ್ವಾ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಉಳ್ಳಾಲ್, ದಿನೇಶ್ ಮುಳೂರು, ಸುದರ್ಶನ್ ಜೈನ್, ಜೋಕಿಮ್ ಡಿ ಸೌಝ, ನಾರಾಯಣ ನಾಯಕ್, ಸಾಹುಲ್ ಹಮೀದ್, ಭಾಸ್ಕರ್ ಕೆ, ವೆಂಕಪ್ಪ ಗೌಡ, ಸುದೀರ್ ಶೆಟ್ಟಿ ಕಡಬ, ಸುರೇಂದ್ರ ಕಾಂಬ್ಳಿ, ಅಬ್ದುಲ್ ರವೂಫ್, ಪಿ ಸಿ ಜಯರಾಮ್ ಸುಳ್ಯ, ಕೃಷ್ಣ ಪ್ರಸಾದ್ ಆಳ್ವಾ ಪುತ್ತೂರು, ಮೋಹನ್ ಕೋಟ್ಯಾನ್ ಮೂಲ್ಕಿ, ಪ್ರಕಾಶ್ ಸಾಲಿಯಾನ್, ಪುರೊಷೋತ್ತಮ ಚಿತ್ರಪುರ, ರಮೇಶ್ ಶೆಟ್ಟಿ ಬೋಳಿಯಾರ್, ನಾಗೇಶ್ ಗೌಡ ಬೆಳ್ತಂಗಡಿ, ಪ್ರಶಾಂತ್ ಕಾಜವ ಮುಡಿಪು, ಪದ್ಮನಾಭ ಪೂಜಾರಿ ವಿಟ್ಲ, ಜೆ. ಅಬ್ದುಲ್ ಸಲೀಂ, ಬೇಬಿ ಕುಂದರ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಬಂಡಾರಿ, ಅಭಿಲಾಶ್ ಕಡಬ, ಅಶ್ರಫ್ ಕೆ, ನಿರಾಜ್ ಚಂದ್ರ ಪಾಲ್, ವಿಕಾಸ್ ಶೆಟ್ಟಿ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಪಿ. ಅಬ್ದುಲ್ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.