November 8, 2025
WhatsApp Image 2025-06-07 at 3.16.27 AM

ಉಳ್ಳಾಲ: ಜೂ.6 ರಂದು ತಡರಾತ್ರಿ ಆಕಸ್ಮಿಕವಾಗಿ ಮನೆಯೊಂದಕ್ಕೆ ಬೆಂಕಿ ತಗಲಿ, ಮನೆಯೊಳಗಿದ್ದ ಇಲೆಕ್ಟ್ರಾನಿಕ್ ಸಾಮಗ್ರಿಗಳು , ದಿನಬಳಕೆ ವಸ್ತುಗಳು ಸೇರಿದಂತೆ ನಾಳೆ ನಡೆಯುವ ಮದುವೆ ಸಮಾರಂಭಕ್ಕೆಂದು ತೆಗೆದಿಡಲಾಗಿದ್ದ ಸೀರೆಗಳೆಲ್ಲವೂ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲ ವೈದ್ಯನಾಥನಗರದಲ್ಲಿ ಸಂಭವಿಸಿದೆ.

ಮೆಹೆಂದಿಗೆ ತೆರಳಿದ್ದ ಕುಟುಂಬ: ಬಗಂಬಿಲ ವೈದ್ಯನಾಥನಗರ ನಿವಾಸಿ ಸುಶೀಲ ಮಡಿವಾಳ್ತಿ ಎಂಬವರ ಮನೆಯಲ್ಲಿ ಅವಘಢ ಸಂಭವಿಸಿದೆ. ಘಟನೆ ಸಂದರ್ಭ ಸುಶೀಲಾ ಸೇರಿದಂತೆ ಅವರ ಪುತ್ರಿ ಆಶಾ, ಪತಿ ಜನಾರ್ದನ, ಸುಶಿಲಾ ಸಹೋದರಿ ಮೀರಾ ಎಲ್ಲರೂ ಮನೆ ಸಮೀಪವೇ ಜರಗಿದ ಸಂಬಂಧಿಕರ ಮೆಹೆಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ವಾಪಸ್ಸಾಗುವಾಗ ಸುಶೀಲಾ ಅವರು ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಮನೆಯೊಳಗೆ ಬೆಂಕಿ ಗೋಚರಿಸಿದೆ. ತಕ್ಷಣವೇ ಮಹೆಂದಿಯಲ್ಲಿ ಭಾಗವಹಿಸಿದ್ದ ಮಂದಿಗೆ ಕೂಗಿ ಕರೆದಿದ್ದು, ಸ್ಥಳೀಯರು ನೆಂಟರು ಸೇರಿಕೊಂಡು ಮನೆಯೊಳಗಡೆ ಇದ್ದ ತುಂಬಿದ ಗ್ಯಾಸ್ ಸಿಲಿಂಡರ್ ಗಳನ್ನು ಮೊದಲಿಗೆ ಹೊರಗೆ ಎಸೆದಿದ್ದಾರೆ. ನಂತರ ಬೆಂಕಿ ನಂದಿಸಲು ಯತ್ನಿಸಿದರೂ ಬೆಂಕಿಯ ಕೆನ್ನಾಲೆ ವ್ಯಾಪಿಸಿದ್ದರಿಂದಾಗಿ ಆರಿಸಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಅದಾಗಲೇ ಮನೆಯೊಳಗೆ ಇದ್ದಂತಹ ಗ್ರೈಂಡರ್, ರೆಫ್ರಿಜರೇಟರ್, ಟಿ.ವಿ, ಫ್ಯಾನ್, ಬಟ್ಟೆಬರೆಗಳು, ಕಪಾಟುಗಳು ಸೇರಿದಂತೆ ಮನೆ ಸಂಪೂರ್ಣ ಸುಟ್ಟುಕರಕಲಾಗಿದೆ.

ಆರ್ಥಿಕ ಸಂಕಷ್ಟಕ್ಕೊಳಗಾದ ಕುಟುಂಬ : ಮನೆಯಲ್ಲಿ ಜನಾರ್ದನ ಅವರು ಕೂಲಿ ಕೆಲಸ ನಿರ್ವಹಿಸುತ್ತಿದ್ದರೆ, ಪತ್ನಿ ಆಶಾ ಸ್ಥಳೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಸುಶೀಲಾ ಮತ್ತು ಮೀರಾ ಮನೆಯಲ್ಲೇ ಇದ್ದಾರೆ. ಇಡೀ ಕುಟುಂಬದ ನಿರ್ವಹಣೆ ಇಬ್ಬರಿಂದ ಬರುವ ಆದಾಯದಿಂದಲೇ ನೆರವೇರುತ್ತಿದೆ. ಸುಶೀಲಾ ಅವರ ಓರ್ವ ಪುತ್ರ ಕೆಲ ವರ್ಷಗಳ ಹಿಂದಷ್ಟೇ ಆಕಸ್ಮಿಕವಾಗಿ ಮೃತಪಟ್ಟಿದ್ದರು. ಸುಶೀಲಾ ಅವರಿಗೂ ಹಾವು ಕಚ್ಚಿದ ಬಳಿಕ ಸರಿಯಾಗಿ ಮಾತನಾಡಲು ಕಷ್ಟಸಾಧ್ಯ. ಹಾಗಾಗಿ ಸಂಸಾರದ ನೌಕೆ ಕಷ್ಟದಲ್ಲಿರುವಾಗ ಇದೀಗ ಮನೆಯೂ ಸಂಪೂರ್ಣ ಸುಟ್ಟು ಹೋದ ಪರಿಣಾಮ 25 ವರ್ಷಗಳಿಂದ ವಾಸವಿದ್ದ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮನೆಮಂದಿ ತಿಳಿಸುವಂತೆ ಶಾರ್ಟ್ ಸರ್ಕ್ಯುಟ್ ನಿಂದಾಗಿ ಘಟನೆ ಸಂಭವಿಸಿರುವುದಾಗಿ ಹೇಳುತ್ತಿದ್ದು, ಆದರೆ ಮನೆಯೊಳಗಿನ ಸೊತ್ತುಗಳಿಂದಲೇ ಆಗಿರುವ ಸಾಧ್ಯತೆಗಳನ್ನು ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.

About The Author

Leave a Reply