October 13, 2025
WhatsApp Image 2025-06-11 at 2.48.03 AM
ಬಂಟ್ವಾಳ : ಅಡಿಕೆ ಕೃಷಿಕರಿಂದ ಅಡಿಕೆ ಖರೀದಿ ಮಾಡಿ ಬಳಿಕ ಹಣ ನೀಡದೆ ಅಡಿಕೆ ವ್ಯಾಪಾರಿ ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಇದೀಗ ಅಡಿಕೆ ಕೃಷಿಕರು ಆರೋಪಿ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿ ಎ.ಬಿ. ಸುಪಾರಿ ಎಂಬ ಅಂಗಡಿ ಹೊಂದಿರುವ ನಾವೂರು ಗ್ರಾಮದ ಮೈಂದಾಳ ನಿವಾಸಿ ನೌಫಲ್‌ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಮೇಲೆ ಸುಮರು 50ಕ್ಕೂ ಅಧಿಕ ಅಡಿಕೆ ಬೆಳೆಗಾರರಿಗೆ ಮೋಸ ಮಾಡಿರುವ ಆರೋಪವಿದ್ದು, ಕೊಟ್ಯಾಂತ ರೂಪಾಯಿ ಬಾಕಿ ಇರಿಸಿಕೊಂಡು ಎಸ್ಕೇಪ್ ಆಗಿದ್ದಾನೆ.ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಪ್ರಕಾರ ಬಂಟ್ವಾಳ ನಿವಾಸಿ ಪ್ರವೀಣ್‌ ಡಿ ಸೋಜಾ (45)ಎಂಬವರು ತಾವು ಬೆಳೆದ ಅಡಿಕೆಯನ್ನು ಆರೋಪಿತನಾದ ನಾವೂರ ಗ್ರಾಮದ ಮೈಂದಾಳದ ನಿವಾಸಿ ನೌಫಲ್‌ ಮಹಮ್ಮದ್‌ ಎಂಬವರ ಎ. ಬಿ. ಸುಪಾರಿ ಅಂಗಡಿಗೆ ಮಾರಾಟ ಮಾಡಿದ್ದಾರೆ. ಆರೋಪಿ ಪ್ರವೀಣ್ ಅವರಿಗೆ ಅಡಿಕೆ ಮಾರಾಟ ಮಾಡಿದಾಗ ಸ್ವಲ್ಪ ಹಣವನ್ನು ಕೊಡುತ್ತಿದ್ದು, ಬಳಿಕ ಸ್ವಲ ದಿನಗಳ ನಂತರ ಹಣವನ್ನು ಕೊಡುತ್ತಿರುವುದಾಗಿದೆ. ಅದೇ ರೀತಿ ಮಾರ್ಚ್ 8 ರಂದು  ಪಿರ್ಯಾದಿದಾರರು ನೌಫಲ್‌ ಮಹಮ್ಮದ್‌ ರವರ ಎ.ಬಿ ಸುಪಾರಿ ಅಂಗಡಿಗೆ ವಾಹನದಲ್ಲಿ ಹೋಗಿ ಸುಮಾರು 6.5 ಕ್ವಿಂಟಾಲ್‌ ಅಡಿಕೆಯನ್ನು ಮಾರಾಟ ಮಾಡಿದ ಅಂದಾಜು ಮೌಲ್ಯ 3,50,000/- ರೂ ಹಣವನ್ನು ಪಿರ್ಯಾದಿದಾರರಿಗೆ ಕೊಟ್ಟಿರುವುದಿಲ್ಲ.ದಿನಾಂಕ 09.06.2025 ರಂದು ರಾತ್ರಿ ಪಿರ್ಯಾದಿರವರಿಗೆ ಆರೋಪಿತನು ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್‌ ಕಳುಹಿಸಿರುತ್ತಾನೆ. ಇದರಿಂದ ಗಾಬರಿಗೊಂಡ ಪಿರ್ಯಾದಿದಾರರು ದಿನಾಂಕ 10-06-2025 ರಂದು ಬೆಳಿಗ್ಗೆ ಆರೋಪಿತನ ಅಂಗಡಿಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು,ಮನೆಗೆ ಬೀಗ ಹಾಕಿರುವುದಾಗಿದೆ. ಆರೋಪಿತನ ಮೊಬೈಲ್ ಸ್ವಿಚ್ಡ್‌ ಆಪ್‌ ಆಗಿದ್ದು, ಸದ್ರಿ ಆರೋಪಿತನೊಂದಿಗೆ ಅಡಿಕೆ ವ್ಯಾಪಾರ ಮಾಡಿ, ಹಣ ಪಡೆಯಲು ಬಾಕಿಯಿದ್ದ ಇತರೆ 24 ಜನರು ಕೂಡಾ ಸದ್ರಿ ಸ್ಥಳದಲ್ಲಿರುತ್ತಾರೆ. ಆರೋಪಿತನು ತನ್ನೊಂದಿಗೆ ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಟ್ಟು ರೂ 94,77,810 /- ನ್ನು ನೀಡದೆ ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆ ಮಾಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಕ್ರ: 64/2025 ಕಲಂ: 316(2) 318(4) ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.ಕಳೆದ ಹಲವು ದಶಕಗಳಿಂದ ಆತ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಬೆಳೆಗಾರರ ವಿಶ್ವಾಸವನ್ನೂ ಗಳಿಸಿದ್ದನು. ಬೆಳೆಗಾರರು ಸುಲಿದ ಒಣ ಅಡಿಕೆಯನ್ನು ಆತನಿಗೆ ನೀಡಿ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಾದ ಸಂದರ್ಭದಲ್ಲಿ ಮಾರಾಟದ ಲೆಕ್ಕಾಚಾರ ಮಾಡುತ್ತಿದ್ದರು. ಈ ವೇಳೆ ಆತನಿಂದ ಕೊಂಚ ಹಣವನ್ನೂ ಪಡೆಯುತ್ತಿದ್ದು, ಈ ವ್ಯವಸ್ಥೆಯಿಂದ ರೈತರಿಗೆ ಹೆಚ್ಚಿನ ಧಾರಣೆ ಸಿಗುತ್ತಿತ್ತು. ಕೆಲವರು ಲೆಕ್ಕಾಚಾರ ಮಾಡಿದ ಬಳಿಕವೂ ಹಣವನ್ನು ಆತನ ಬಳಿಯೇ ಇರಿಸಿಕೊಳ್ಳುತ್ತಿದ್ದರು.ಅಡಿಕೆ ಖರೀದಿಸಿದ ಬಳಿಕ ಆತ ನೀಡುವ “ಬಿಳಿ ಚೀಟಿ’ಯೇ ಅಧಿಕೃತ ದಾಖಲೆಯಾಗಿರುತ್ತಿತ್ತು. ಅಂದರೆ ಕೇವಲ ವಿಶ್ವಾಸದಿಂದ ನಡೆಯುವ ವ್ಯವಹಾರ ಅದಾಗಿತ್ತು. ಬೆಳೆಗಾರರು ಆತನ ಖಾಯಂ ಗ್ರಾಹಕರಾಗಿರುವ ಕಾರಣ ವ್ಯಾಪಾರಿಯೇ ಸಾಕಷ್ಟು ಕೃಷಿಕರ ಮನೆಗೆ ತೆರಳಿ ಅಡಿಕೆಯನ್ನು ತನ್ನ ವಾಹನದಲ್ಲಿ ತುಂಬಿಸಿ ತರುತ್ತಿದ್ದನು. ಆದರೆ ಕೆಲವು ಸಮಯಗಳ ಹಿಂದೆ ತಂದ ಅಡಿಕೆಯ ಹಣವನ್ನು ನೀಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕೆಲವರಿಗೆ 30 ಲಕ್ಷ ರೂ.ಗಳಿಗೂ ಹೆಚ್ಚಿನ ಮತ್ತು ಇನ್ನು ಕೆಲವರಿಗೆ 50 ಸಾವಿರ ರೂ.ಗಳಷ್ಟು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

About The Author

Leave a Reply