ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ರೈ ರವರನ್ನು ನಿಂದಿಸಿರುವ ಪ್ರಕರಣ- ದೂರು ದಾಖಲು

ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ ರವರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

ಜು. 7 ಪುತ್ತೂರಿನ ದರ್ಬೆಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಅಜಿತ್ ಮಡಿಕೇರಿ ಎನ್ನುವ ವ್ಯಕ್ತಿ ಶಾಸಕರನ್ನು ಅವಹೇಳನಾಕಾರಿಯಾಗಿ ಬೈದು, ಜೀವ ಬೆದರಿಕೆಯನ್ನು ಮಾಡಿರುತ್ತಾರೆ. ಅಲ್ಲದೇ ಅಯೋಗ್ಯ ಶಾಸಕ ಎಂದು ಹೇಳುವುದರ ಮೂಲಕ ಶಾಸಕರಿಗೆ ಅವಮಾನ ಮಾಡಿರುತ್ತಾರೆ. ಅಲ್ಲದೇ ಇಸ್ಲಾಮಿಕ್ ಭಯೋತ್ಪಾದಕ ಗೂಂಡಗಳಿಗೆ ಶಾಸಕರು ಬೆಂಬಲಿಸಿದ್ದಾರೆಂದು ಎಂದು ಹೇಳುವುದರ ಮೂಲಕ ಭಾಷಣದಲ್ಲಿ ಕೋಮು ಪ್ರಚೋದನೆಯನ್ನು ಮಾಡಿರುತ್ತಾರೆ. ಸಂಘ ಪರಿವಾರದ ಸಭೆಯಲ್ಲಿ ಸಾರ್ವಜನಿಕವಾಗಿ ಶಾಸಕರನ್ನು ದಮನಿಸುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಶಾಸಕರ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆ ಬಗ್ಗೆ ಇವರ ಪ್ರಭಾವವನ್ನು ಕುಂದಿಸಲು ಸುಳ್ಳು ಆರೋಪವನ್ನು ಹೊರಿಸಿರುತ್ತಾರೆ.
ಆದ್ದರಿಂದ ಶಾಸಕರನ್ನು ಬೆದರಿಸುವ ಇವರ ದುರಹಂಕಾರದ ವರ್ತನೆಗೆ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

Leave a Reply