
ರಿಯಾದ್: 20 ವರ್ಷಗಳ ಕಾಲ ಕೋಮಾದಲ್ಲಿದ್ದ ಸ್ಲೀಪಿಂಗ್ ಪ್ರಿನ್ಸ್ ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನರಾಗಿದ್ದಾರೆ.

ಶನಿವಾರ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಭಾನುವಾರ ರಿಯಾದ್‌ನಲ್ಲಿ ನಡೆಯಲಿದೆ ಎಂದು ಅವರ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ತಿಳಿಸಿದ್ದಾರೆ.

ರಾಜಕುಮಾರ ತಲಾಲ್ 36 ವರ್ಷ ವಯಸ್ಸಿನವರಾಗಿದ್ದರು. ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳ ಹೊರತಾಗಿಯೂ ಅವರು ಚೇತರಿಸಿಕೊಳ್ಳುವ ಆಶಾಭಾವನೆಯನ್ನು ಅವರ ಕುಟುಂಬವು ಹೊಂದಿತ್ತು. ಆದರೆ, ಶನಿವಾರ ಕೊನೆಯುಸಿರೆಳೆದಿರುವುದಾಗಿ ರಾಜಮನೆತನದ ಅಧಿಕಾರಿಗಳು ಸೌದಿ ಅರೇಬಿಯಾದ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.

ರಾಜಕುಮಾರ ಅಲ್-ವಲೀದ್ ಸೌದಿ ಅರೇಬಿಯಾದ ಸಂಸ್ಥಾಪಕ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ರಾಜಕುಮಾರ ತಲಾಲ್ ಬಿನ್ ಅಬ್ದುಲಾಜೀಜ್ ಅವರ ಸುಪುತ್ರ. ರಾಜಕುಮಾರ ಅಲ್-ವಲೀದ್ ಸೌದಿ ರಾಜಮನೆತನದ ಉತ್ತರಾಧಿಕಾರಿಯಾಗಿ ಎಲ್ಲರ ಸಮ್ಮುಖದಲ್ಲಿ ರಾರಾಜಿಸಬೇಕಿತ್ತು.
ಕಳೆದ 20 ವರ್ಷಗಳಿಂದ ಪ್ರಿನ್ಸ್ ವಾಲಿದ್ ಹಾಸಿಗೆ ಮೇಲೆಯೇ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಪ್ರಿನ್ಸ್ ಅಲ್-ವಲೀದ್ ಕಳೆದ 20 ವರ್ಷಗಳಿಂದ ವೆಂಟಿಲೇಟರ್ ಸಹಾಯದಲ್ಲಿದ್ದರು. ಫೀಡಿಂಗ್ ಟ್ಯೂಬ್ ಮೂಲಕ ಆಹಾರವನ್ನು
ನೀಡಲಾಗುತ್ತಿತ್ತು.
ಮಲಗಿದ್ದಲ್ಲೇ ಇದ್ದದ್ದರಿಂದ ರಾಜಕುಮಾರ ತಲಾಲ್ ಅವರನ್ನು ‘ಸ್ಲೀಪಿಂಗ್ ಪ್ರಿನ್ಸ್’ ಎಂದೇ ಗುರುತಿಸಲಾಗುತ್ತಿತ್ತು. 2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಅಪಘಾತವಾಗಿತ್ತು. ಅಂದಿನಿಂದ 20 ವರ್ಷಗಳ ಕಾಲ ಅವರು ಕೋಮಾದಲ್ಲಿದ್ದರು.
ಅಬ್ದುಲಜೀಜ್ ಅವರು ಮಗನ ಮೇಲೆ ಹೊಂದಿದ್ದ ಕರುಣೆ ವಿಶ್ವದೆಲ್ಲೆಡೆ ಹಬ್ಬಿತ್ತು. ಅವನ ಸಾವು ಬದುಕು ದೇವರಿಚ್ಛೆ ಎಂದು ಅವರು ಹೇಳಿಕೊಂಡಿದ್ದರು. ‘ನಿದ್ರೆಯಲ್ಲಿರುವ ರಾಜಕುಮಾರʼ ಎಂಬ ಹೆಸರಿನಲ್ಲಿ ಅವರ ಕುರಿತ ಸುದ್ದಿಗಳು, ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಗಮನ ಸೆಳೆದಿದ್ದವು.