ಯುವಕನ ಜೊತೆ ಮಗಳು ಓಡಿ ಹೋಗಿದಕ್ಕೆ ಪೊಲೀಸ್ ಠಾಣೆ ಎದುರೇ ತಂದೆ ಆತ್ಮಹತ್ಯೆ.!

ರಾಜ್ಯದಲ್ಲೊಂದು ದಾರುಣ ಘಟನೆಯೊಂದು ನಡೆದಿದ್ದು, ಯುವಕನೊಬ್ಬನ ಜೊತೆ ಓಡಿ ಹೋದ ಮಗಳನ್ನು ಮಾತನಾಡಿಸಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗದ ಹೊಳಲ್ಕೆರೆ ಠಾಣೆಯ ಮುಂದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಿಲ್ಕೇನಹಳ್ಳಿಯ ಅಜ್ಜಯ್ಯ(51) ಮೃತ ದುರ್ದೈವಿ. ಅಜ್ಜಯ್ಯನ ಪ್ರೀತಿಯ ಮಗಳು ವಾರದ ಹಿಂದೆ ಗೊತ್ತು ಗುರಿಯಿಲ್ಲದ ಯುವಕ ರಘು ಎಂಬಾತನ ಜತೆ ಮನೆ ಬಿಟ್ಟು ಹೋಗಿದ್ದಾಳೆ.

ಕಳೆದ ಒಂದು ವಾರದಿಂದ ಹೊಳಲ್ಕೆರೆ ಠಾಣೆಗೆ ಮಗಳನ್ನು ಒಮ್ಮೆ ಕರೆಸಿ ಮಾತಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಮಗಳ ಜೊತೆಗೆ ಮಾತನಾಡಲು ಅವಕಾಶ ಸಿಗದಿದ್ದಕ್ಕೆ ಮನನೊಂದ ಅಜ್ಜಯ್ಯ ಭಾನುವಾರ ಸಂಜೆ ವೇಳೆ ಹೊಳಲ್ಕೆರೆ ಠಾಣೆ ಎದುರೇ ವಿಷ ಸೇವಿಸಿದ್ದಾರೆ. ಗಮನಿಸಿದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅಜ್ಜಯ್ಯ ಮೃತಪಟ್ಟಿದ್ದಾರೆ.

Leave a Reply