
ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್.ಸಿ ನ್ಯಾಯಾಲಯ ಬೆಳ್ತಂಗಡಿ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪುಗಳನ್ನು ನೀಡಿದೆ.


ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್.ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ ಅವರು ಈ ತೀರ್ಪು ನೀಡಿದ್ದು, ಆರೋಪಿಯನ್ನು ಚೆಕ್ ಅಮಾನ್ಯ ಪ್ರಕರಣಗಳ ಆರೋಪದಿಂದ ದಿನಾಂಕ 01.08.2024 ರಂದು ಖುಲಾಸೆಗೊಳಿಸಿದೆ.

ಚಾರ್ಮಾಡಿ ಗ್ರಾಮದ ನಿವಾಸಿ ಶಾಹುಲ್ ಹಮೀದ್ ಅವರ ವಿರುದ್ಧ ಗುರುವಾಯನಿಕರೆಯ ನಿವಾಸಿಯೊಬ್ಬರು 3 ಲಕ್ಷ ರೂಪಾಯಿ ಹಾಗೂ 2.5 ಲಕ್ಷ ರೂಪಾಯಿಯ ಒಟ್ಟು ಎರಡು ಚೆಕ್ ಅಮಾನ್ಯ ಪ್ರಕರಣಗಳು ದಾಖಲಿಸಿದ್ದರು. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಕೆಲವು ದಾಖಲೆಗಳು ಹಾಗೂ ಚೆಕ್ ಗಳನ್ನು ದುರುಪಯೋಗಪಡಿಸಿಕೊಂಡು ಗುರುವಾಯನಿಕೆರೆಯ ನಿವಾಸಿಯೊಬ್ಬರು ಆರೋಪಿಯ ವಿರುದ್ಧ ಎರಡು ಚೆಕ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು.
ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಚೆಕ್ ಸಹಿತ 5 ದಾಖಲೆಯನ್ನು ಹಾಜರುಪಡಿಸಿದ್ದರು. ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಲಯವು ದಾಖಲೆ ಮತ್ತು ಮೌಖಿಕ ಸಾಕ್ಷಿಯನ್ನು ಪರಿಗಣಿಸಿ ಹಾಗೂ ಫಿರ್ಯಾದಿ ಮತ್ತು ಆರೋಪಿ ಪರ ವಕೀಲರ ವಾದ ವಿವಾದವನ್ನು ಆಲಿಸಿದ ಬಳಿಕ ಆರೋಪಿ ಸದ್ರಿ ಪ್ರಕರಣಗಳಲ್ಲಿ ತಪ್ಪಿತಸ್ಥನಲ್ಲ ಎಂದು ತೀರ್ಮಾನಿಸಿ ಎರಡು ಚೆಕ್ ಅಮಾನ್ಯ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಆರೋಪಿ ಪರವಾಗಿ ಲೆಕ್ಸ್ ಜೂರಿಸ್ ಲಾ ಚೇಂಬರ್ ವಕೀಲರಾದ ಓಮರ್ ಫಾರೂಕ್ ಮುಲ್ಕಿ, ಅಯಾಜ್ ಚಾರ್ಮಾಡಿ ಹಾಗೂ ಅಸ್ಗರ್ ಮುಡಿಪು, ಅಸ್ಮಾ ರಿಜ್ವಾನ್ ಬೆಳ್ತಂಗಡಿ ಅವರು ವಾದ ಮಂಡಿಸಿದ್ದರು.