
ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ 12 ಜನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಘಟನೆ ಸಂಬಂಧ ಮಾಹಿತಿ ಪಡೆದಿದ್ದ ಸವದತ್ತಿ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಬೆಚ್ಚಿ ಬೀಳಿಸೋ ಘಟನೆ ಬೆಳಕಿಗೆ ಬಂದಿದೆ.


ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 41ಮಕ್ಕಳು ಓದುತ್ತಾರೆ. ಹೊರಗಿನವರು ಬಂದು ಶಾಲೆಯ ನೀರಿನ ಟ್ಯಾಂಕ್ನಲ್ಲಿ ವಿಷ ಹಾಕಿಲ್ಲ ಎಂಬುವುದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ನಂತರ, ಪೊಲೀಸರು ಶಿಕ್ಷಕರಿಗೆ ಮಕ್ಕಳನ್ನು ವಿಚಾರಣೆ ನಡೆಸಿ ಎಂದು ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಶಿಕ್ಷಕರು ಮಕ್ಕಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಓರ್ವ ಬಾಲಕ ಅಂದು ನಾನು ಟ್ಯಾಂಕ್ ಒಳಗೆ ಜ್ಯೂಸ್ ಹಾಕಿದೆ ಅಂತ ಹೇಳಿದ್ದಾನೆ.

ಆತನಿಗೆ ಯಾರು ಜ್ಯೂಸ್ ಬಾಟಲ್ ಕೊಟ್ಟಿದ್ದು ಅಂತ ವಿಚಾರಿಸಿದಾಗ ಅದೇ ಗ್ರಾಮದ ಕೃಷ್ಣ ಮಾದರ್ ಎಂಬಾತ ಕೊಟ್ಟಿದ್ದಾಗಿ ಬಾಲಕ ಹೇಳಿದ್ದಾನೆ. ಚಾಲಕ ಕೃಷ್ಣಾನನ್ನು ಎತ್ತಾಕ್ಕೊಂಡು ಬಂದು ವಿಚಾರಣೆ ನಡೆಸಿದಾಗ ಮಕ್ಕಳನ್ನು ಕೊಲ್ಲಲು ಮಾಡಿದ್ದ ಪ್ಲ್ಯಾನ್ ಹೊರ ಬಿದ್ದಿದೆ. ಮೂರು ಬಗೆಯ ವಿಷಗಳನ್ನು ಸೇರಿಸಿ ಮಾಜಾ ಬಾಟಲ್ನಲ್ಲಿ ಹಾಕಿ, ಬಾಲಕನಿಗೆ ನೀಡಿ, ನೀರಿನ ಟ್ಯಾಂಕ್ ಒಳಗೆ ಹಾಕುವಂತೆ ಹೇಳಿದ್ದೆ ಎಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ನೀರಿನ ಟ್ಯಾಂಕ್ ಒಳಗೆ ವಿಷ ಹಾಕುವಂತೆ ನಾಗನಗೌಡ ಪಾಟೀಲ್ ಮತ್ತು ಶ್ರೀ ರಾಮ ಸೇನೆಯ ತಾಲೂಕ ಅಧ್ಯಕ್ಷ ಸಾಗರ್ ಪಾಟೀಲ್ ಎಂಬವರು ನನಗೆ ಹೇಳಿದ್ದರು. ವಿಷ ಹಾಕದಿದ್ದರೇ ನಾನು (ಕೃಷ್ಣ) ಅನ್ಯ ಜಾತಿ ಹುಡುಗಿಯನ್ನು ಪ್ರೀತಿ ಮಾಡುವ ವಿಚಾರ ಊರಲ್ಲಿ ಹೇಳುತ್ತೇವೆ ಅಂತ ಬ್ಲ್ಯಾಕ್ಮೇಲ್ ಮಾಡಿದ್ದರು. ಇದರಿಂದ ಭಯಗೊಂಡು ಬಾಲಕನಿಗೆ ಚಾಕಲೇಟ್ ಮತ್ತು ಐದನೂರು ರೂಪಾಯಿ ನೀಡಿ ಪುಸಲಾಯಿಸಿ ವಿಷ ಹಾಕಿಸಿದ್ದೆ ಅಂತ ತಪ್ಪೊಪ್ಪಿಕೊಂಡಿದ್ದಾನೆ.
ಬಳಿಕ ಸಾಗರ್ ಪಾಟೀಲ್ ಎಂಬಾತನೇ ಮೂರು ರೀತಿ ವಿಷ ತಂದಿದ್ದು, ಅದನ್ನು ಮಾಜಾ ಬಾಟಲ್ನಲ್ಲಿ ಹಾಕಿ ಕೃಷ್ಣನಿಗೆ ಕೊಟ್ಟಿದ್ದಾಗಿ ಹೇಳಿದ್ದಾನೆ.ಊರಲ್ಲಿ ಜಮೀನು ನೋಡಿಕೊಳ್ಳುತ್ತಾ, ಹಿಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಗೆ ಕಳೆದ 13 ವರ್ಷಗಳಿಂದ ಸುಲೇಮಾನ್ ತಮ್ಮೂರಿನಲ್ಲಿ ಕೆಲಸ ಮಾಡುತ್ತಿರುವುದು ಇಷ್ಟ ಇರಲಿಲ್ಲ. ಆತ ಮುಸ್ಲಿಂ ಎಂಬ ಕಾರಣಕ್ಕೆ ಊರು ಬಿಡಿಸಲು ಈ ಪ್ಲ್ಯಾನ್ ಮಾಡಿದ್ದನು.
ವಿಷ ಹಾಕಿದ ನೀರನ್ನು ಸೇವಿಸಿ ಮಕ್ಕಳು ಅಸ್ವಸ್ಥರಾಗುತ್ತಾರೆ, ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಸುಲೇಮಾನ್ ಗೋರಿನಾಯಕ್ ಕಾರಣ ಆಗುತ್ತಾನೆ. ಆತನನ್ನು ಕೆಲಸದಿಂದ ವಜಾ ಮಾಡುತ್ತಾರೆ. ಈ ಕಾರಣದಿಂದ ಕೃತ್ಯ ಎಸಗಿದ್ದಾಗಿ ಹೇಳಿದ್ದನು.ಸದ್ಯ ಮೂರು ಜನರಾದ ಕೃಷ್ಣಾ ಮಾದರ್, ಸಾಗರ್ ಪಾಟೀಲ್, ನಾಗನಗೌಡ ಪಾಟೀಲ್ ಮೂವರನ್ನೂ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ