
ಧರ್ಮಸ್ಥಳ : ಧರ್ಮಸ್ಥಳದಲ್ಲಿ ನಾಲ್ವರು ಯೂಟ್ಯೂಬರ್‌ಗಳ ಮೇಲೆ ಇಂದು ನಡೆದ ಮಾರಣಾಂತಿಕ ಹಲ್ಲೆ ಹಾಗೂ ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟವು ಗಲಭೆ ನಡೆಸುವ ಉದ್ದೇಶದಿಂದ ಪೂರ್ವಯೋಜಿತವಾಗಿ ನಡೆದಿರುವ ಘಟನೆಯಾಗಿದ್ದು ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ತಿಳಿಸಿದ್ದಾರೆ


ಧರ್ಮಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ವರದಿ ಮಾಡುತ್ತಿದ್ದ ನಾಲ್ವರು ವರದಿಗಾರರು ಮೇಲೆ ಸಂಘಟಿತವಾಗಿ ಗುಂಪು ಕಟ್ಟಿಕೊಂಡು ಬಂದು ದಾಳಿ ನಡೆದಿದೆ. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಧರ್ಮಸ್ಥಳ ಸಮೀಪದ ಪುದುಬೆಟ್ಟು ಎಂಬಲ್ಲಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.

ಇದೆಲ್ಲವೂ ಕೇವಲ ದಾಳಿ ಮಾಡುವುದಷ್ಟೇ ಅಲ್ಲದೆ, ಸಮಾಜದಲ್ಲಿ ಭಯ ಮತ್ತು ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಹಿಂಸೆ ಮೂಲಕ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವ ಇಂತಹ ಕೃತ್ಯಗಳನ್ನು ಯಾವ ಕಾರಣಕ್ಕೂ ಅನುಮತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
‘ಈ ಗಲಭೆ ಉದ್ದೇಶಿತ ಹಲ್ಲೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಹಾಗೂ ಈ ಕೃತ್ಯಕ್ಕೆ ಪ್ರೇರಣೆ ನೀಡಿದವರನ್ನು ಸಹ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ತುರ್ತು ಭದ್ರತಾ ಕ್ರಮ ಕೈಗೊಳ್ಳಬೇಕು.
ಸಾಮಾಜಿಕ ಮಾಧ್ಯಮ ಕ್ರಿಯಾಶೀಲರು, ಪತ್ರಕರ್ತರು ಹಾಗೂ ಸಾರ್ವಜನಿಕರ ರಕ್ಷಣೆಗೆ ರಾಜ್ಯ ಸರ್ಕಾರ ವಿಶೇಷ ಮಾರ್ಗಸೂಚಿ ರೂಪಿಸಬೇಕು. ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಯತ್ನಿಸುವವರ ವಿರುದ್ಧ ಎಲ್ಲರೂ ಎಚ್ಚರಿಕೆಯಿಂದಿರಬೇಕು ಮತ್ತು ಶಾಂತಿ, ಸೌಹಾರ್ದತೆ ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.