August 19, 2025
WhatsApp Image 2025-08-16 at 2.39.25 PM

ಮಂಗಳೂರು : ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ದೋಚಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೊನೆಗೂ ಪ್ರಕರಣ ದಾಖಲಾಗಿದೆ. ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಹೆಸರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರಿಂದ ಹತ್ತು ಕೋಟಿಗೂ ಹೆಚ್ಚು ಪೀಕಿಸಿದ್ದಾನೆಂದು ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕಂಪನಿಯ ಪ್ರೊಪ್ರೈಟರ್ ಮೊಹಮ್ಮದ್ ಅಶ್ರಫ್ ಮತ್ತು ಮ್ಯಾನೇಜರ್ ಆಗಿದ್ದ ಹನೀಫ್ ಬಂಧಿತರು. ಇವರು ಬಜಪೆಯವರಾಗಿದ್ದು ನ್ಯೂ ಇಂಡಿಯಾ ರಾಯಲ್ ಹೆಸರಿನಲ್ಲಿ ಕಾಟಿಪಳ್ಳದಲ್ಲಿ ಕಚೇರಿ ತೆರೆದು ಲಕ್ಕಿ ಸ್ಕೀಮ್ ನಡೆಸುತ್ತಿದ್ದರು. ಸಂಸ್ಥೆಯ ಹೆಸರಿನಲ್ಲಿ ಪ್ರತಿ ತಿಂಗಳು ಒಂದು ಸಾವಿರ ಕಟ್ಟಿದರೆ ದುಬಾರಿ ಕಾರು, ಫ್ಲಾಟ್, ದ್ವಿಚಕ್ರ ವಾಹನ, ಬಂಗಾರದ ಸರ ಇನ್ನಿತರ ಗಿಫ್ಟ್ ಸಿಗುತ್ತೆ ಎಂದು ನಂಬಿಸುತ್ತಿದ್ದರು. ಏಜಂಟರ ಮೂಲಕ ಕಳೆದ ಐದಾರು ವರ್ಷಗಳಲ್ಲಿ 15ಕ್ಕೂ ಹೆಚ್ಚು ಸೀಸನ್ ನಡೆಸಿದ್ದು, ಈ ಬಾರಿಯ ಸೀಸನ್ ಕಳೆದ ಎಪ್ರಿಲ್ ತಿಂಗಳಿಗೆ ಮುಗಿದಿತ್ತು. 12 ತಿಂಗಳ ಡ್ರಾ ಫಲಿತಾಂಶದಲ್ಲಿ ಕೂಪನ್ ಗೆಲ್ಲದವರಿಗೆ ವರ್ಷದ ಕೊನೆಯಲ್ಲಿ ಬಡ್ಡಿ ಸಹಿತ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು. ಆದರೆ ಈ ಬಾರಿ ಹಣ ಹಿಂತಿರುಗಿಸುವ ಬದಲು ಮೇ ತಿಂಗಳ ಕೊನೆಯಲ್ಲಿ ಕಾಟಿಪಳ್ಳದ ಕಚೇರಿಯನ್ನೇ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದರು.

ಇದರಿಂದ ಚಿಂತೆಗೆ ಒಳಗಾದ ಹಣ ಕಟ್ಟಿ ಸಂತ್ರಸ್ತರಾದವರು ಮೊಹಮ್ಮದ್ ಅಶ್ರಫ್ ಪತ್ತೆಗೆ ಮುಂದಾಗಿದ್ದರು. ಆದರೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಶ್ರಫ್ ಪರಾರಿಯಾಗಿದ್ದ. ಜುಲೈ ತಿಂಗಳ ಆರಂಭದಲ್ಲಿ ಕಾಟಿಪಳ್ಳದ ನ್ಯೂ ಇಂಡಿಯಾ ಕಚೇರಿಗೂ ಮುತ್ತಿಗೆ ಹಾಕಿದ್ದರು. ಆದರೆ ಅಶ್ರಫ್ ನಿಗೂಢ ಜಾಗದಿಂದ ಎಲ್ಲರಿಗೂ ಹಣ ಹಿಂತಿರುಗಿಸುತ್ತೇನೆ ಎಂದು ವಿಡಿಯೋ ಮಾಡುತ್ತ ಕಾಲ ತಳ್ಳುತ್ತಿದ್ದ. ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಸ್ಕೀಮ್ ನಡಿ ಹಣ ಕಟ್ಟಿದ್ದರು ಎನ್ನಲಾಗುತ್ತಿದ್ದು, ಹಣ ಸಿಗುತ್ತೆ ಎಂಬ ಭರವಸೆಯಲ್ಲಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೇ ರೀತಿಯ ಮೋಸದ ಲಕ್ಕಿ ಸ್ಕೀಮ್ ಕಾಟಿಪಳ್ಳ, ಸುರತ್ಕಲ್, ಮಂಗಳೂರಿನಲ್ಲಿ ನಡೆಯುತ್ತಿರುವ ಬಗ್ಗೆ ವರದಿ ಮಾಡಿತ್ತು. ಈ ಸುದ್ದಿ ಭಾರೀ ವೈರಲ್ ಆಗಿದ್ದು, ಸಂತ್ರಸ್ತರನ್ನು ಪೊಲೀಸ್ ಠಾಣೆ ಹತ್ತುವಂತೆ ಪ್ರೇರೇಪಿಸಿತ್ತು. ಇದೀಗ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ನ್ಯೂ ಇಂಡಿಯಾ ರಾಯಲ್ ಹೆಸರಲ್ಲಿ ಹಣ ಕಟ್ಟಿ ಮೋಸ ಹೋಗಿರುವ ಭುಜಂಗ ಪೂಜಾರಿ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಒಂದು ವರ್ಷದಿಂದ ಹಣ ಕಟ್ಟಿದ್ದು ಎಪ್ರಿಲ್ ವೇಳೆಗೆ ಹಣ ಕೇಳಿದಾಗ ನೆಪ ಹೇಳಿಕೊಂಡು ಬಂದಿದ್ದರು. ಈಗ ಕಚೇರಿ ಬಂದ್ ಮಾಡಿ ನಾಪತ್ತೆಯಾಗಿದ್ದಾರೆ. ಇದೇ ರೀತಿ ಹತ್ತು ಸಾವಿರಕ್ಕು ಹೆಚ್ಚು ಜನರಿಂದ ಹಣ ಸಂಗ್ರಹಿಸಿದ್ದು ಹತ್ತು ಕೋಟಿಗೂ ಹೆಚ್ಚು ವಂಚನೆ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

About The Author

Leave a Reply