August 24, 2025
5

ಮಂಗಳೂರು  : ಸುರತ್ಕಲ್ ನಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿದ್ದ ಮತ್ತೊಬ್ಬ ಸಾವಿರಾರು ಜನರಿಗೆ ಮೋಸ ಮಾಡಿ ದುಬೈಗೆ ಹಾರಿದ್ದಾನೆ. ವಫಾ ಹೆಸರಿನಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿದ್ದ ಅಬ್ದುಲ್ ವಹಾಬ್ ಕುಳಾಯಿ ಎಂಬಾತ ಹಣ ಕೊಡಲಾಗದೆ ಊರು ಬಿಟ್ಟು ದುಬೈಗೆ ಹಾರಿದ್ದು, ಅಲ್ಲಿಂದ ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸತ್ತ ಗ್ರಾಹಕರು ಸುರತ್ಕಲ್ ನಲ್ಲಿರುವ ಆತನ ಮಳಿಗೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನ್ಯೂ ಇಂಡಿಯಾ ರಾಯಲ್ ಹೆಸರಿನಲ್ಲಿ ಲಕ್ಕಿ ಸ್ಕೀಮ್ ಹೆಸರಲ್ಲಿ ಹತ್ತು ಕೋಟಿಗೂ ಹೆಚ್ಚು ವಂಚನೆ ನಡೆಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೇ ಮಾದರಿಯ ಲಕ್ಕಿ ಸ್ಕೀಮ್ ನಡೆಸುತ್ತಿದ್ದ ವಹಾಬ್ ಕುಳಾಯಿ ನಾಪತ್ತೆಯಾಗಿದ್ದಾನೆ. ತಿಂಗಳಿಗೆ ಒಂದು ಸಾವಿರದಂತೆ ಹಣ ಪಡೆದು ಪ್ರತಿ ತಿಂಗಳು ಡ್ರಾದಲ್ಲಿ ದುಬಾರಿ ಫ್ಲಾಟ್, ಕಾರು ಕೊಡಿಸುವುದಾಗಿ ಹೇಳಿ ಜನರನ್ನು ಯಾಮಾರಿಸಿದ್ದು, ಕಳೆದ ಮೂರು ವರ್ಷದಲ್ಲಿ ಐದು ಸೀಸನ್ ಲಕ್ಕಿ ಸ್ಕೀಮ್ ನಡೆಸಿದ್ದಾಗಿ ಗ್ರಾಹಕರು ಹೇಳುತ್ತಿದ್ದಾರೆ.

ವಫಾ ಲಕ್ಕಿ ಸ್ಕೀಮ್ ಯೋಜನೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿದ್ದು, ಅವರಿಂದ ಪಡೆದ ಹಣದಲ್ಲಿ ವಹಾಬ್ ಬಜ್ಪೆ, ಸುರತ್ಕಲ್, ಕೃಷ್ಣಾಪುರದಲ್ಲಿ ಬೇರೆ ಬೇರೆ ಉದ್ಯಮ ಆರಂಭಿಸಿದ್ದ. ವಫಾ ಫರ್ನಿಚರ್, ಇಲೆಕ್ಟ್ರಾನಿಕ್ಸ್ ಶಾಪ್, ಗೋಲ್ಡ್ ಅಂಡ್ ಡೈಮಂಡ್ಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ. ಸುರತ್ಕಲ್, ಬಜ್ಪೆ, ಕಾಪು, ಕೃಷ್ಣಾಪುರದಲ್ಲಿ ಈತನ ಮಳಿಗೆ ಇದ್ದವು. ಮೊನ್ನೆ ಭಾನುವಾರ ಸುರತ್ಕಲ್ ನಲ್ಲಿದ್ದ ಗೋಲ್ಡ್ ಅಂಡ್ ಡೈಮಂಡ್ಸ್ ಕಚೇರಿಗೆ ನುಗ್ಗಿದ ಗ್ರಾಹಕರು ವಹಾಬ್ ಬಗ್ಗೆ ಪ್ರಶ್ನಿಸಿ ರಂಪ ಮಾಡಿದ್ದಾರೆ. ಲಕ್ಕಿ ಸ್ಕೀಮ್ ನಲ್ಲಿ ಹಣ ಕಟ್ಟಿ ಹತ್ತು  ತಿಂಗಳಾದರೂ ಹಣ ಕೊಟ್ಟಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಆದರೆ ವಹಾಬ್ ಕುಳಾಯಿ ದುಬೈನಲ್ಲಿ ವಿಡಿಯೋ ಮಾಡಿದ್ದು, ನಾವು ಹಣ ಕೊಡುತ್ತೇವೆ, ಜನರು ತಾಳ್ಮೆಯಲ್ಲಿರಿ, ನಮ್ಮದು ದುಬೈನಲ್ಲೂ ಬಿಸಿನೆಸ್ ಇದೆ, ಅದಕ್ಕಾಗಿ ಬಂದಿದ್ದೇನೆ ಎಂದು ಹೇಳುತ್ತಿದ್ದಾನೆ.

ನ್ಯೂ ಇಂಡಿಯಾ ರಾಯಲ್ ಹೆಸರಲ್ಲಿಯೂ ಮೊಹಮ್ಮದ್ ಅಶ್ರಫ್ ಎಂಬಾತ ಇದೇ ರೀತಿ ನಿಗೂಢ ಜಾಗದಲ್ಲಿದ್ದುಕೊಂಡು ವಿಡಿಯೋ ಮಾಡುತ್ತಿದ್ದ. ಆನಂತರ, ಕೇಸು ದಾಖಲಾದ ಬಳಿಕ ಪೊಲೀಸರು ಅರೆಸ್ಟ್ ಮಾಡಿದ್ದರು. ವಹಾಬ್ ಬಳಿ ಸಾಕಷ್ಟು ದುಡ್ಡಿದೆ ಎಂದು ಹೇಳಲಾಗುತ್ತಿದ್ದು, 20 ಸಾವಿರಕ್ಕೂ ಹೆಚ್ಚು ಜನರಿಂದ 3-4 ವರ್ಷದಲ್ಲಿ ಹಣ ಕಟ್ಟಿಸಿಕೊಂಡು ಮೂರು ನಾಮ ಹಾಕಿದ್ದಾನೆ.

About The Author

Leave a Reply