August 26, 2025
WhatsApp Image 2025-08-26 at 12.27.27 PM

ಉಜಿರೆ: ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧದ ವೇಳೆ ಸಿಸಿಟಿವಿ ಮತ್ತು ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್‌ ಫೋನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯನ್ನು ಎಸ್‌ಐಟಿ ಪೊಲೀಸರು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.

ಎಸ್‌ಐಟಿ ಉತ್ಖನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್‌ ಬಳಸುತ್ತಿರಲಿಲ್ಲ. ನನ್ನ ಮೊಬೈಲ್‌ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಚಿನ್ನಯ್ಯ ಹೇಳಿದ್ದ. ಈ ಕಾರಣಕ್ಕೆ ಕೊಠಡಿಯ ಮಹಜರು ನಡೆಸಿ ಮೊಬೈಲ್‌ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆದಿದೆ.

  

ಧರ್ಮಸ್ಥಳದಲ್ಲಿ ಶೋಧ ನಡೆಯುತ್ತಿದ್ದಾಗ ಬುರುಡೆ ಗ್ಯಾಂಗ್‌ನ ಎಲ್ಲ ಸದಸ್ಯರು ತಿಮರೋಡಿ ಮನೆಯಲ್ಲೇ ತಂಗಿದ್ದರು. ಎಲ್ಲ ಪ್ಲ್ಯಾನ್‌ಗಳು ಇಲ್ಲೇ ಸಿದ್ಧವಾಗುತ್ತಿದ್ದವು. ಹೀಗಾಗಿ ತಿಮರೋಡಿ ಮನೆಗೆ ಯಾರೆಲ್ಲ ಬಂದಿದ್ದರು ಎಂಬೆಲ್ಲ ವಿವರಗಳನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ಹಾರ್ಡ್‌ ಡಿಸ್ಕ್‌ ವಶಕ್ಕೆ ಪಡೆದಿದ್ದಾರೆ.

ತಿಮರೋಡಿ ಮನೆಯ ಕೊಠಡಿಯಲ್ಲಿ ಚಿನ್ನಯ್ಯ ಕೆಲ ರಾಷ್ಟ್ರೀಯ ಮಾಧ್ಯಮ ಮತ್ತು ಯೂಟ್ಯೂಬ್‌ ವಾಹಿನಿಗಳಿಗೆ ಸಂದರ್ಶನ ನೀಡಿದ್ದ. ಈ ಸಂದರ್ಶನದ ವಿಡಿಯೋ ಕೆಲ ದಿನಗಳಿಂದ ಪ್ರಸಾರವಾಗುತ್ತಿದೆ. ಹೀಗಾಗಿ ಸಂದರ್ಶನ ನೀಡಿದ ಜಾಗಗಳ ಮಹಜರು ಪ್ರಕ್ರಿಯೆಯನ್ನು ಎಸ್‌ಐಟಿ ಪೊಲೀಸರು ನಡೆಸಿದ್ದಾರೆ.

ಸಿಸಿಟಿವಿ ಡಿವಿಆರ್‌ಗಳನ್ನು ಪೊಲೀಸರು ಪಡೆದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಿಮರೋಡಿ ನಿವಾಸಕ್ಕೆ ಆಗಮಿಸಿದ್ದ ವ್ಯಕ್ತಿಗಳ ವಿಚಾರಣೆಯನ್ನು ಪೊಲೀಸರು ನಡೆಸುವ ಸಾಧ್ಯತೆಯಿದೆ. ಇವರುಗಳನ್ನು ಪ್ರಕರಣದ ಸಾಕ್ಷಿಗಳಾಗುವ ಸಾಧ್ಯತೆಯಿದೆ. ತಮ್ಮ ಪರವಾಗಿ ಸುದ್ದಿಗಳನ್ನು ಪ್ರಚಾರ ಮಾಡಲು ಕೆಲ ಯೂಟ್ಯೂಬರ್‌ಗಳಿಗೆ ಬುರುಡೆ ಗ್ಯಾಂಗ್‌ ಪ್ರೋತ್ಸಾಹ ನೀಡುತ್ತಿತ್ತು. ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳು ತಿಮರೋಡಿ ನಿವಾಸದಲ್ಲಿ ತಂಗಿದ್ದರು. ಈ ಯೂಟ್ಯೂಬರ್‌ಗಳನ್ನು ಪೊಲೀಸರು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.

ದಾಳಿ ನಡೆಯುವ ಬಗ್ಗೆ ಖಚಿತ ಮಾಹಿತಿ ಇದ್ದ ಕಾರಣ ಪೊಲೀಸ್‌ ವಾಹನಗಳ ಜೊತೆ ಇಂದು ಬೆಳಗ್ಗೆ ಮಾಧ್ಯಮಗಳ ವಾಹನಗಳು ತಿಮರೋಡಿಗೆ ತೆರಳಿತ್ತು. ಆದರೆ ಪೊಲೀಸರು ತಿಮರೋಡಿಗೆ ಹೋಗುವ ಮಾರ್ಗ ಮಧ್ಯೆಯೇ ಎಲ್ಲಾ ಮಾಧ್ಯಮಗಳ ವಾಹನಗಳನ್ನು ತಡೆದು ನಿಲ್ಲಿಸಿದ್ದರು.

About The Author

Leave a Reply