
ಪುತ್ತೂರು: ಆಸ್ತಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರಕ್ಕೆ 12 ಸಾವಿರ ಲಂಚ ಪಡೆಯುವ ವೇಳೆ ಪುತ್ತೂರು ತಹಶೀಲ್ದಾರ್ ಕಛೇರಿಯ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಹಶೀಲ್ದಾರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ ಸುನೀಲ್ ಎಂಬಾತ ದೂರುದಾರರಿಂದ 12,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸುನೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪುತ್ತೂರು ತಹಶೀಲ್ದಾರ್ ಕುಡಲಗಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದೂರುದಾರ ಚಿಕ್ಕಪ್ಪ ಎಂಬವರಿಗೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿದ್ದು, ಚಿಕ್ಕಪ್ಪನವರಿಗೆ ಅನಾರೋಗ್ಯ ಇದ್ದುದರಿಂದ ಅವರು ತನ್ನ ಸ್ವ-ಇಚ್ಛೆಯಿಂದ ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ವೀಲುನಾಮೆ ಯಾನೆ ಮರಣ ಶಾಸನ ಬರೆಸಿ ಕೊಟ್ಟಿರುತ್ತಾರೆ.
ಜಮೀನನ್ನು ಪರಭಾರೆ ಮಾಡಲು ಪುತ್ತೂರು ತಹಶೀಲ್ದಾರ್‌ರವರಿಂದ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇದ್ದುದರಿಂದ ಚಿಕ್ಕಪ್ಪನವರು 2024ರ ಡಿಸೆಂಬರ್‌ರಂದು ಮಂಜೂರಾದ ಜಾಗ ಮಾರಾಟ ಮಾಡಲು ತಹಶೀಲ್ದಾರರಿಗೆ ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಇಲ್ಲಿಯವರೆಗೆ ನಿರಾಕ್ಷೇಪಣಾ ಪತ್ರ ಸಿಕ್ಕಿರದೇ ಇದ್ದುದರಿಂದ ಅರ್ಜಿಯ ಬಗ್ಗೆ ವಿಚಾರಿಸಿದಾಗ ತಹಶೀಲಾರರಿಗೆ 10 ಸಾವಿರ ಹಾಗೂ ಕೇಸ್ ವರ್ಕರ್ ಸುನಿಲ್‌ಗೂ ಹಣ ನೀಡುವಂತೆ ಬೇಡಿಕೆ ಇಡಲಾಗಿತ್ತು.
ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ. ಕೇಸ್ ವರ್ಕರ್ ಸುನಿಲ್ ಲಂಚದ ಹಣ 2 ಸಾವಿರವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಂಗಳೂರು ವಿಭಾಗ ಲೋಕಾಯುಕ್ತ ಪೊಲೀಸ್ ಅಧೀಖ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕ ಭಾರತಿ ಜಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್ ಇವರು ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ಕೈಗೊಂಡಿರುತ್ತಾರೆ.