

ಮಂಗಳೂರು : ಮಂಜನಾಡಿ ಗುಡ್ಡಕುಸಿತದ ದುರಂತದಲ್ಲಿ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡ ತನ್ನ ಕಾಲನ್ನು ಕಳೆದುಕೊಂಡಿರುವ ಸಂತ್ರಸ್ಥೆ ಅಶ್ವಿನಿ ಅವರನ್ನು ತನಿಖೆಗೆ ಕರೆದಿದ್ದ ಅಧಿಕಾರಿ ಘಟನಾ ಸ್ಥಳಕ್ಕೆ ಆಗಮಿಸದೇ ಗೈರು ಹಾಜರಾದ ಘಟನೆ ನಡೆದಿದ್ದು, ಅಧಿಕಾರಿಯ ವಿರುದ್ದ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲದ ಆರಂಭದಲ್ಲಿ ಮಂಜನಾಡಿ ಉರುಮಣೆ ಎಂಬಲ್ಲಿ ಗುಡ್ಡ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಆಶ್ವಿನಿಯವರ ಇಬ್ಬರು ಪುಟಾಣಿ ಮಕ್ಕಳು ಹಾಗೂ ಅತ್ತೆ ಮೃತಪಟ್ಟಿದ್ದರು. ಅಶ್ವಿನಿ ತನ್ನೆರಡು ಕಾಲುಗಳನ್ನೂ ಕಳೆದುಕೊಂಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಅಶ್ವಿನಿ ಅಗಸ್ಟ್ 8 ರಂದು 11 ಗಂಟೆಗೆ ಘಟನಾ ಸ್ಥಳದಲ್ಲಿ ಹಾಜರಿರುವಂತೆ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಾಟ್ಸ್ ಆ್ಯಪ್ ಮೂಲಕ ನೋಟಿಸ್ ನೀಡಿದ್ದರು.
ಅದರಂತೆ ಅಶ್ವಿನಿಯವರನ್ನು ಕುಟುಂಸ್ಥರು ಹರೇಕಳದ ತಾಯಿ ಮನೆಯಿಂದ ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಆದರೆ 11 ಗಂಟೆಯಾದರೂ ತನಿಖಾಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಮೊಬೈಲ್ ಮೂಲಕ ಅಧಿಕಾರಿಯನ್ನು ಸಂಬಂಧಿಕರು ಸಂಪರ್ಕಿಸಿದ್ದಾರೆ. ಈ ವೇಳೆ ಅಧಿಕಾರಿ, ತಾನು ಅನಾರೋಗ್ಯಕ್ಕೀಡಾಗಿದ್ದಾನೆ. ಆದ್ದರಿಂದ ಬರುವುದಿಲ್ಲ ಎಂದು ಬೆಳಗ್ಗೆ 9:30ರ ಸುಮಾರಿಗೆ ಅಶ್ವಿನಿಯವರ ಸಂಬಂಧಿಕರ ಮೊಬೈಲ್ ಗೆ ಸಂದೇಶ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಹೆಚ್ಚು ಮಾತನಾಡದೇ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯುತ ವರ್ತನೆಯ ಬಗ್ಗೆ ಕುಟುಂಬಿಕರು, ಸ್ಥಳೀಯರು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.