

ತ್ರಿಶೂರ್: ತ್ರಿಶೂರ್ ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೈಕ್ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ನೂರಾರು ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಘಟನೆ ಬೆಳಿಗ್ಗೆ ಸುಮಾರು 6.15ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ.
ರೈಲು ನಿಲ್ದಾಣದ ಎರಡನೇ ಗೇಟ್ ಸಮೀಪ ಇರುವ ಬೈಕ್ ಪಾರ್ಕಿಂಗ್ ಶೆಡ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಒಂದು ಬೈಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಿಪ್ರವಾಗಿ ಇತರ ಬೈಕ್‌ಗಳಿಗೆ ಹರಡಿದ್ದು, ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಗಂಭೀರಗೊಂಡಿದೆ. ಪಾರ್ಕಿಂಗ್‌ನಲ್ಲಿ ಸುಮಾರು 200ಕ್ಕೂ ಹೆಚ್ಚು ಬೈಕ್‌ಗಳು ನಿಂತಿದ್ದವು ಎಂದು ತಿಳಿದುಬಂದಿದ್ದು, ಅವೆಲ್ಲವೂ ಬೆಂಕಿಗೆ ಆಹುತಿಯಾಗಿವೆ.ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಮೂರು ಘಟಕಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸುತ್ತಿದ್ದು, ಶೆಡ್‌ಗೆ ತೀವ್ರ ಹಾನಿಯಾಗಿದೆ. ಪಾರ್ಕಿಂಗ್ ಶೆಡ್ ಬೀಳುವ ಹಂತದಲ್ಲಿದ್ದು, ಭದ್ರತಾ ದೃಷ್ಟಿಯಿಂದ ಸುತ್ತಮುತ್ತಲ ಪ್ರದೇಶವನ್ನು ತೆರವುಗೊಳಿಸಲಾಗಿದೆ.ಬೆಂಕಿಯ ತಾಪದಿಂದ ಹತ್ತಿರದ ಮರಕ್ಕೂ ಬೆಂಕಿ ತಗುಲಿದ್ದು, ಮರದ ಒಂದು ದೊಡ್ಡ ಕೊಂಬೆ ಮುರಿದು ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.






