

ಪಟ್ಟಣಂತಿಟ್ಟ: ರಾಜ್ಯದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದ 10 ತಿಂಗಳ ಮಗು ಆಲಿನ್ ಶೆರೀನ್ ಅಬ್ರಹಾಂ ಅಂತ್ಯಸಂಸ್ಕಾರವನ್ನು ಜನಸಾಗರದ ನಡುವೆ ಭಾನುವಾರ ಸಂಜೆ ನೆಡುಂಗಡಪಲ್ಲಿ ಸೆಂಟ್ ಥಾಮಸ್ ಸಿಎಸ್‌ಐ ಚರ್ಚ್‌ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.ಶುಕ್ರವಾರ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ಘೋಷಿಸಲಾಗಿದ್ದ ಆಲಿನ್ ಅಂಗಾಂಗ ದಾನದ ಮೂಲಕ ನಾಲ್ಕು ಮಕ್ಕಳಿಗೆ ಜೀವ ನೀಡಿದ್ದಳು. ಆಕೆಯ ಲಿವರ್, ಕಿಡ್ನಿ, ಕಣ್ಣು ಮತ್ತು ಹೃದಯ ಕವಾಟಗಳನ್ನು ದಾನ ಮಾಡಲಾಗಿತ್ತು. ಕುಟುಂಬಕ್ಕೆ ಆದ ತುಂಬಲಾರದ ನಷ್ಟವನ್ನು ಇತರ ಮಕ್ಕಳಿಗೆ ಜೀವದಾನ ಮಾಡುವ ಮೂಲಕ ತುಂಬಿಕೊಳ್ಳಲು ಪೋಷಕರು ನಿರ್ಧರಿಸಿದ್ದರು.
ಕೊಟ್ಟಾಯಂನಲ್ಲಿ ಫೆ.5ರಂದು ಪೋಷಕರು ಹಾಗೂ ಸಂಬಂಧಿಕರ ಜತೆಗೆ ಈ ಮಗು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಗುವಿಗೆ ತೀವ್ರ ಗಾಯಗಳಾಗಿದ್ದವು. ಪುಟ್ಟ ಮಗುವಿನ ಅಂಗಾಂಗ ದಾನಕ್ಕೆ ಕಾರಣರಾದ ತಂದೆ ಅರುಣ್ ಅಬ್ರಹಾಂ ಮತ್ತು ಶೆರೀನ್ ಆ್ಯನ್ ಜಾನ್ ಅವರ ಮಾನವೀಯತೆಯನ್ನು ಗೌರವಿಸುವ ಸಲುವಾಗಿ ಮಲ್ಲಪಳ್ಳಿ ಬಳಿಯ ನೆಡುಂಗದಪಳ್ಳಿಯ ವೆಲುಮನ್ನಿಲಿಗೆ ಜನಸಾಗರವೇ ಭಾನುವಾರ ಬೆಳಿಗ್ಗೆಯಿಂದ ಹರಿದಿತ್ತು. ಬೆಳಿಗ್ಗೆ 7.45ರ ವೇಳೆಗೆ ಆಲಿನ್ ಮೃತದೇಹವನ್ನು ತರಲಾಗಿತ್ತು. ಮಲ್ಲಿಗೆಯಿಂದ ಸುತ್ತಲಾಗಿದ್ದ ಪುಟ್ಟ ಮೃತದೇಹಪೆಟ್ಟಿಗೆಯಲ್ಲಿ ಪುಟ್ಟ ದಾನಿಯ ಮೃತದೇಹವನ್ನು ಇರಿಸಲಾಗಿತ್ತು. ಶೋಕಸಾಗರದ ನಡುವೆ ಪೋಷಕರು ಹಾಗೂ ಬಂಧುಗಳು ಮೃತದೇಹಪೆಟ್ಟಿಗೆಯ ಪಕ್ಕ ಇದ್ದರು.
ಸಚಿವರಾದ ವೀಣಾ ಜಾರ್ಜ್, ವಿ.ಎನ್.ವಾಸವನ್, ಸಂಸದ ಸುರೇಶ್ ಗೋಪಿ ಹಾಗೂ ಹಲವು ಮಂದಿ ಜನಪ್ರತಿನಿಧಿಗಳು ಮನೆಗೆ ಭೇಟಿ ನೀಡಿ ಪುಟ್ಟ ಆತ್ಮಕ್ಕೆ ಶಾಂತಿ ಕೋರಿದರು. ಪೋಷಕರ ನಿರ್ಧಾರದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ರಾಜ್ಯದ ಮೂಲೆಮೂಲೆಗಳಿಂದ ಜನ ಆಗಮಿಸಿ ಪುಟ್ಟ ಮಗುವಿಗೆ ಅಂತಿಮ ನಮನ ಸಲ್ಲಿಸಿದರು.ಮಧ್ಯಾಹ್ನ 3 ಗಂಟೆ ವೇಳೆಗೆ ಅಪಾರ ಅಭಿಮಾನಿಗಳೊಂದಿಗೆ ಚರ್ಚ್ ಆವರಣಕ್ಕೆ ಶವಯಾತ್ರೆ ತಲುಪಿತು. ಉಕ್ಕಿ ಬರುತ್ತಿದ್ದ ಕಣ್ಣೀರಿನ ನಡುವೆಯೂ, ನಾಲ್ವರು ಮಕ್ಕಳಿಗೆ ಜೀವದಾನ ಮಾಡಿದ ಹೆಮ್ಮೆ ಇದೆ ಎಂದು ಅಜ್ಜ ರಾಜಿ ಸ್ಯಾಮ್ಯುಯೆಲ್ ಹೇಳಿದರು.






