

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಫೆ. 26ರಂದು ರಾತ್ರಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ನಿಂತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ&ಸು) ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲಿ KA-13-B-8178 ನೋಂದಣಿಯ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ರಸ್ತೆ ಬದಿಯಲ್ಲಿ ನಿಂತಿರುವುದು ಕಂಡುಬಂದಿತು.ವಾಹನವನ್ನು ಪರಿಶೀಲಿಸಿದಾಗ, ಅದರಲ್ಲಿ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡಲಾಗುತ್ತಿದ್ದುದು ಪತ್ತೆಯಾಯಿತು. ವಾಹನದಲ್ಲಿದ್ದ ಮಂಡ್ಯ ಜಿಲ್ಲೆಯ ನಿವಾಸಿಗಳಾದ ಚಾಲಕ ನವೀನ್ ಹಾಗೂ ಚೇತನ್ ಅವರನ್ನು ವಿಚಾರಿಸಿದಾಗ, ಚನ್ನರಾಯಪಟ್ಟಣದ ಶಂಕರ್ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಶಾಫಿ ಎಂಬವರಿಗೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಕಳುಹಿಸಿರುವುದಾಗಿ ತಿಳಿದುಬಂದಿದೆ. ಜೊತೆಗೆ, ಜಾನುವಾರು ಸಾಗಾಟಕ್ಕೆ ಬೇರೆಯವರ ಹೆಸರಿನಲ್ಲಿ ದಾಖಲಾತಿ ಪಡೆದು ಸಾಗಿಸುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ.

ಈ ಸಂಬಂಧ ವಾಹನ ಮತ್ತು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 51/2026ರಂತೆ The Karnataka Prevention of Slaughter and Preservation of Cattle Act-2020 ರ ಕಲಂ 4, 7, 12, Prevention of Cruelty to Animals Act, 1960 ರ ಕಲಂ 4, 11 ಹಾಗೂ Indian Motor Vehicles Act, 1988 ರ ಕಲಂ 192(A) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






