February 28, 2026
mj

ಕರಾವಳಿ ನೆಲದ ಹೃದಯಸ್ಪರ್ಶಿ ಕೋಮು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಅಪೂರ್ವ ಘಟನೆ ಕನ್ಯಾನದಲ್ಲಿ ನಡೆಯಿತು. ಕೆ.ಟಿ. ಭಟ್ ಎಂದೇ ಪ್ರಸಿದ್ಧರಾದ ಕನ್ಯಾನದ ಕೊಣಲೆ ದಿವಂಗತ ಶ್ರೀ ತಿರುಮಲೇಶ್ವರ ಭಟ್ ಅವರ ಕುಟುಂಬದಲ್ಲಿ ನಡೆದ ಮದುವೆ ಸಂಭ್ರಮವು ಸಮಾಜದ ಒಗ್ಗಟ್ಟಿಗೆ ಹೊಸ ಸಂದೇಶ ನೀಡಿದೆ. ಅವರ ಮಗ ಕೊಣಲೆ ಶ್ಯಾಂ ಭಟ್ ಅವರು ತಮ್ಮ ಪುತ್ರ ವೈಭವ ಪ್ರಸಾದ್ ಅವರ ವಿವಾಹದ ಅಂಗವಾಗಿ ಧರ್ಮ–ಜಾತಿ ಭೇದವಿಲ್ಲದೆ ಸೌಹಾರ್ದತೆಯ ಸೇತುವೆ ಕಟ್ಟಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದಿನಾಂಕ 27/02/2026 ರಂದು ರಾತ್ರಿ, ವಿಶೇಷವಾಗಿ ಮುಸ್ಲಿಂ ಬಾಂಧವರಿಗಾಗಿ ಬನಾರಿ ದೇವಸ್ಥಾನದ ಸಭಾಂಗಣದಲ್ಲಿ ಭರ್ಜರಿ ಔತಣ ಕೂಟವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನ್ಯಾನ ಹಾಗೂ ಕರೋಪಾಡಿ ಗ್ರಾಮದ ನೂರಾರು ಮುಸ್ಲಿಂ ಸಮುದಾಯದವರು ಭಾಗವಹಿಸಿ, ಆತ್ಮೀಯತೆಯೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿಭಿನ್ನ ಸಮುದಾಯದ ಜನರು ಒಂದೇ ವೇದಿಕೆಯಲ್ಲಿ ಸೇರಿ ಸಂತೋಷ ಹಂಚಿಕೊಂಡ ದೃಶ್ಯ, ನಿಜಕ್ಕೂ ಕರಾವಳಿಯ ಸಂಸ್ಕೃತಿಯ ವೈಭವವನ್ನು ತೋರಿಸಿತು.

ಇಂತಹ ಸೌಹಾರ್ದದ ಘಟನೆಗಳು ಕನ್ಯಾನದಲ್ಲಿ ಇದೇ ಮೊದಲೇ ನಡೆದಿರುವುದು ಗಮನಾರ್ಹ. ಕೆಲವು ವರ್ಷಗಳ ಹಿಂದೆ ಕನ್ಯಾನ ಭಾರತ್ ಸೇವಾಶ್ರಮದ ಮುಖ್ಯಸ್ಥರಾದ ಶ್ರೀ ಈಶ್ವರ ಭಟ್ ಅವರು ತಮ್ಮ ಮಗನ ವಿವಾಹದ ಅಂಗವಾಗಿ ಕನ್ಯಾನ ಟೌನ್ ಮಸೀದಿಯಲ್ಲಿ ಬೃಹತ್ ಇಫ್ತಾರ್ ಕೂಟ ಏರ್ಪಡಿಸಿ ಸಮುದಾಯಗಳ ನಡುವೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು. ಆ ಮಧುರ ನೆನಪನ್ನು ಈ ಸಂದರ್ಭ ಹಲವರು ಸ್ಮರಿಸಿದರು.

ಕರಾವಳಿಯ ಮಣ್ಣಿನ ವಿಶೇಷತೆ ಅಂದರೆ — ವೈವಿಧ್ಯದಲ್ಲೂ ಏಕತೆ. ಇಂತಹ ಮಾನವೀಯತೆ ಮತ್ತು ಪರಸ್ಪರ ಗೌರವದ ಕಾರ್ಯಕ್ರಮಗಳು ಸಮಾಜಕ್ಕೆ ದಾರಿದೀಪವಾಗಿವೆ. ಧರ್ಮಕ್ಕಿಂತ ಮನುಷ್ಯತ್ವ ದೊಡ್ಡದು ಎಂಬ ಸಂದೇಶವನ್ನು ಕನ್ಯಾನದ ಈ ವಿಶಿಷ್ಟ ಮದುವೆ ಮತ್ತೊಮ್ಮೆ ಘೋಷಿಸಿದೆ. ಇಂತಹ ಸೌಹಾರ್ದತೆಯ ಸನ್ನಿವೇಶಗಳು ಇನ್ನಷ್ಟು ಹೆಚ್ಚಲಿ ಎಂಬುದು ಸಮಾನ ಮನಸ್ಕರ ಹಾರೈಕೆ.

About The Author

Leave a Reply