March 8, 2026
WhatsApp Image 2026-03-08 at 9.28.06 AM

ದಾವಣಗೆರೆ: ಬೆಣ್ಣೆನಗರಿಯಲ್ಲಿ ಉದ್ಯಮಿಯೊಬ್ಬರನ್ನು ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಹನಿಟ್ರ್ಯಾಪ್ ಗ್ಯಾಂಗ್ ಒಂದನ್ನು ವಿದ್ಯಾನಗರ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಷ್ಟದಲ್ಲಿದ್ದೇನೆ ಎಂದು ನಂಬಿಸಿ ಉದ್ಯಮಿಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದ ಕಿಲಾಡಿ ಯುವತಿ ಹಾಗೂ ಆಕೆಯ ತಂಡ ಈಗ ಕಂಬಿ ಎಣಿಸುತ್ತಿದೆ.

ಘಟನೆಯ ಹಿನ್ನೆಲೆ:

ಬಂಧಿತರನ್ನು ಸುಷ್ಮಿತಾ (27), ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಮತ್ತು ಚನ್ನಬಸಪ್ಪ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸುಷ್ಮಿತಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ನಗರದ 66 ವರ್ಷದ ಉದ್ಯಮಿಯೊಬ್ಬರಿಗೆ ತಾನು ಸಂಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಪರಿಚಯವಾಗಿದ್ದಳು. ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು.

ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್:

ತನ್ನ ತಂಡದೊಂದಿಗೆ ಒಳಸಂಚು ರೂಪಿಸಿದ್ದ ಸುಷ್ಮಿತಾ, ಉದ್ಯಮಿ ಸಿದ್ದವೀರಪ್ಪ ಬಡಾವಣೆಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿರುವುದನ್ನು ತಿಳಿದು ಅಲ್ಲಿಗೆ ತಂಡದೊಂದಿಗೆ ನುಗ್ಗಿದ್ದಾಳೆ. ಅಲ್ಲಿ ಉದ್ಯಮಿಯ ವಿಡಿಯೋ ಚಿತ್ರೀಕರಿಸಿಕೊಂಡ ಆರೋಪಿಗಳು, ಬಳಿಕ ಅದನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ.

₹25 ಲಕ್ಷಕ್ಕೆ ಬೇಡಿಕೆ:

“ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ನೀಡುತ್ತೇವೆ” ಎಂದು ಬೆದರಿಸಿದ ಗ್ಯಾಂಗ್, ಬರೋಬ್ಬರಿ 25 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದೆ. ಸಂತ್ರಸ್ತ ಉದ್ಯಮಿ ಅಂತಿಮವಾಗಿ 12 ಲಕ್ಷ ನೀಡಲು ಒಪ್ಪಿ ಅಲ್ಲಿಂದ ಬಂದಿದ್ದರು. ಆದರೆ ಆರೋಪಿಗಳು ಪದೇ ಪದೆ ಫೋನ್ ಮಾಡಿ ಪೀಡಿಸತೊಡಗಿದ್ದರು.

ಪೊಲೀಸ್ ಕಾರ್ಯಾಚರಣೆ:

ಒಂದು ಲಕ್ಷ ರೂಪಾಯಿ ಹಣದೊಂದಿಗೆ ಆಂಜನೇಯ ಬಡಾವಣೆಗೆ ಬರುವಂತೆ ಆರೋಪಿಗಳು ಉದ್ಯಮಿಗೆ ಸೂಚಿಸಿದ್ದರು. ಅಲ್ಲಿಗೆ ಹೋದಾಗ ಉದ್ಯಮಿಯ ಬಳಿಯಿದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಎಸ್‌ಪಿ ಶೇಖರ್ ಹೆಚ್. ತೆಕ್ಕಣ್ಣನವರ್ ನೇತೃತ್ವದ ಪೊಲೀಸರು ನಾಲ್ವರನ್ನು ದಸ್ತಗಿರಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ಅಪರಿಚಿತ ವ್ಯಕ್ತಿಗಳು “ಕಷ್ಟದಲ್ಲಿದ್ದೇವೆ” ಎಂದು ಸಾಮಾಜಿಕ ಜಾಲತಾಣ ಅಥವಾ ಇತರೆಡೆ ಪರಿಚಯ ಮಾಡಿಕೊಂಡಾಗ ಎಚ್ಚರದಿಂದಿರಲು ಪೊಲೀಸರು ಸೂಚಿಸಿದ್ದಾರೆ.

About The Author

Leave a Reply