April 3, 2026
WhatsApp Image 2026-04-03 at 9.04.00 AM

ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕುಡ್ತಮುಗೇರು ಪ್ರಾಥಮಿಕ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಎಂ.ಆರ್.ಪಿ.ಎಲ್ CSR ನಿಧಿಯಿಂದ ₹30 ಲಕ್ಷ ಅನುದಾನ ಮಂಜೂರಾಗಿದೆ. ವಿಧಾನಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಅವರ ಶಿಪಾರಸ್ಸಿನ ಮೇರೆಗೆ ಈ ಅನುದಾನ ಬಿಡುಗಡೆಯಾಗಿದ್ದು, ಸ್ಥಳೀಯ ಜನರಲ್ಲಿ ಅಪಾರ ಸಂತೋಷ ಮೂಡಿಸಿದೆ. ಈ ಮೂಲಕ ಹಲವು ವರ್ಷಗಳಿಂದ ಕಟ್ಟಡದ ಕೊರತೆಯಿಂದ ಬಳಲುತ್ತಿದ್ದ ಆರೋಗ್ಯ ಕೇಂದ್ರಕ್ಕೆ ಹೊಸ ಜೀವ ಬಂದಿದೆ.

ಈ ಕೇಂದ್ರದ ಸ್ಥಾಪನೆಗಾಗಿ ಹಿಂದಿನಿಂದಲೂ ಶ್ರಮಿಸುತ್ತಿದ್ದ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹಾಗೂ ಎಂ.ಎಸ್. ಮಹಮ್ಮದ್ ಅವರು, ಮಾಜಿ ಸಚಿವ ಬಿ. ರಮನಾಥ ರೈ ಅವರ ಅವಧಿಯಲ್ಲಿ ಮನವಿ ಸಲ್ಲಿಸಿದ್ದರು. ಮಂಜೂರಾದರೂ ಸ್ವಂತ ಕಟ್ಟಡವಿಲ್ಲದ ಕಾರಣ ಮಂಕುಡೆ ಶಾಲೆಯಲ್ಲಿ ತಾತ್ಕಾಲಿಕವಾಗಿ ಕಾರ್ಯಾರಂಭಗೊಂಡ ಈ ಕೇಂದ್ರ, ವಿವಿಧ ಕಾರಣಗಳಿಂದ ಸ್ಥಳಾಂತರದ ಭೀತಿ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಕೇಂದ್ರವನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿದರು. ಯಾವುದೇ ಕಾರಣಕ್ಕೂ ಈ ಆರೋಗ್ಯ ಕೇಂದ್ರ ಸ್ಥಳಾಂತರವಾಗಬಾರದು ಎಂಬ ದೃಢ ನಿಲುವಿನಿಂದ ಅವರು ಶಾಸಕರಾದ ಡಾ. ಮಂಜುನಾಥ ಭಂಡಾರಿ ಅವರಿಗೆ ಮನವಿ ಸಲ್ಲಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹತ್ವದ ಪಾತ್ರವಹಿಸಿದರು.

ಸರಕಾರದಿಂದ ಅನುದಾನ ಲಭ್ಯವಿಲ್ಲದ ಪರಿಸ್ಥಿತಿಯಲ್ಲೂ, ಶಾಸಕ ಡಾ. ಮಂಜುನಾಥ ಭಂಡಾರಿ ಅವರು ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದ ಎಂ.ಆರ್.ಪಿ.ಎಲ್ CSR ನಿಧಿಯಿಂದ ಅನುದಾನ ತರಿಸಿ ಕೊಟ್ಟಿರುವುದು ಶ್ಲಾಘನೀಯ. ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಮನಗಂಡು ಕೈಗೊಂಡ ಈ ಕಾರ್ಯಕ್ಕೆ ಸ್ಥಳೀಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸುಭಾಶ್ಚಂದ್ರ ಶೆಟ್ಟಿಯವರ ನಿರಂತರ ಪ್ರಯತ್ನವೂ ಜನಮನ ಗೆದ್ದಿದೆ.

ಅನುದಾನ ಒದಗಿಸಿದ MRPL ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಕೃಷ್ಣರಾಜ ಹೆಗ್ಡೆ ಹಾಗೂ ಆಡಳಿತ ಮಂಡಳಿಗೆ ಹಾಗೂ ಶಿಪಾರಸ್ಸು ಮಾಡಿದ ಶ್ರೀ ಮಂಜುನಾಥ ಭಂಡಾರಿಯವರಿಗೆ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಕೃತಜ್ಞತೆ ಸಲ್ಲಿಸಿರುತ್ತಾರೆ.

About The Author

Leave a Reply